ನ್ಯೂಸ್ ನಾಟೌಟ್: ಕೊಡಗಿನ ಮಡಿಕೇರಿ ಎಂದರೆ ಸಾಕು ಎಲ್ಲರಿಗೂ ನೆನಪು ಬರುವುದು ರಾಜ ಸೀಟ್. ಹೌದು ಮಡಿಕೇರಿಗೆ ಬಂದವರು ರಾಜಸೀಟ್ ಗೆ ಭೇಟಿ ನೀಡದೆ ಹೊಗುವುದು ಬಹಳ ವಿರಳ. ಇಲ್ಲಿಗೆ ದಿನನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡಿ ರಾಜಸೀಟಿನ ಸೌಂದರ್ಯವನ್ನು ಆಹ್ಲಾದಿಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಬಂದು ಎಂಜಾಯ್ ಮಾಡುತ್ತಾರೆ. ದೇಶದ ವಿವಿಧ ಭಾಗಗಳಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಮಾತ್ರವಲ್ಲದೆ,ಪ್ರವಾಸಿಗರು ಪ್ರವಾಸ ಕೈಗೊಂಡು ಇಲ್ಲಿನ ಪ್ರಕೃತಿ ರಮಣೀಯ ತಾಣವನ್ನು ನೋಡಿ ಆನಂದಿಸುತ್ತಾರೆ.
ಪ್ರವಾಸಿಗರ ಹಾಟ್ ಫೇವರಿಟ್:
ಮಡಿಕೇರಿಯ ಚಿಕ್ಕ ವೀರರಾಜನ ಕಾಲದಲ್ಲಿದ್ದ ರಾಜನು ಸಂಜೆಯ ಸಮಯದಲ್ಲಿ ಅರಮನೆಯಿಂದ ರಾಣಿಯೊಂದಿಗೆ ವಿಹಾರ ಹೊರಟು ನಗರ ದಂಚಿಗೆ ಬಂದು ಕುಳಿತು ದಿನನಿತ್ಯ ಸೂರ್ಯಾಸ್ತಮಾನದ ಮನೋಹರ ದೃಶ್ಯವನ್ನು ನೋಡುತ್ತಿದ್ದರಂತೆ. ರಾಜನು ಕುಳಿತು ನೋಡುತ್ತಿದ್ದ ಸ್ಥಳವೇ ಮುಂದೆ ರಾಜಾಸೀಟ್ ಎಂಬ ಹೆಸರಿನೊಂದಿಗೆ ಕರೆಯಲ್ಪಟ್ಟಿತು. ಬ್ರಿಟಿಷರ ಆಡಳಿತಾವಧಿಯಲ್ಲಿ ಇಲ್ಲೊಂದು ಸಿಮೆಂಟ್ ಹಾಗೂ ಹೆಂಚು ಬಳಸಿ ನಾಲ್ಕು ಕಮಾನುಗಳುಳ್ಳ ಭವ್ಯ ಮಂಟಪವನ್ನು ನಿರ್ಮಿಸಲಾಯಿತು.ಮಡಿಕೇರಿಗೆ ಟೂರ್ ಬರುವವರೆಲ್ಲಾ ಇಷ್ಟ ಪಡುವುದು ಇಲ್ಲಿನ ಪ್ರಕೃತಿ, ಬೆಟ್ಟಗುಡ್ಡ,ಬೆಟ್ಟದ ತುತ್ತ ತುದಿಯಲ್ಲಿ ನಿಂತು ಸುತ್ತಲೂ ಹಸಿರ ರಾಶಿ ಇವುಗಳೆನ್ನೆಲ್ಲಾ ವೀಕ್ಷಿಸುವುದೇ ಆನಂದ.ಹಿಂದೆ ಕೊಡಗಿನ ರಾಜ ಈ ರಾಜಾಸೀಟಿನಲ್ಲಿ ಕುಳಿತು ಸೂರ್ಯಾಸ್ತವನ್ನು ಆಸ್ವಾದಿಸುತ್ತಿದ್ದನಂತೆ.ಹಾಗಾಗಿ ಇಂದಿಗೂ ರಾಜಾಸೀಟ್ ಪ್ರವಾಸಿಗರ ಹಾಟ್ ಫೇವರೀಟ್.
ಹೊಸ ರಾಜಸೀಟ್ ಹೇಗಿದೆ ಗೊತ್ತಾ ?
ರಾಜ ಸೀಟು ಈಗ ಉದ್ಯಾನವನ ವಾಗಿ ಮಾರ್ಪಡು ಗೊಂಡಿದೆ. ಎಲ್ಲಾ ಸೀಸನಲ್ಲೂ ಒಂದೊಂದು ರೀತಿಯ ಹವಾಮಾನವನ್ನು ನೋಡಬಹುದು. ಚಳಿಗಾಲದಲ್ಲಂತೂ ಎಲ್ಲೆಡೆ ಮಂಜು ಆವರಿಸಿಕೊಂಡಿದ್ರೆ ಮಳೆಗಾಲದಲ್ಲಿ ಮೋಡಗಳು ಕಾಣಸಿಗುತ್ತವೆ. ಬೇಸಿಗೆಯಲ್ಲಿ ವೀವ್ ಪೊಯಿಂಟ್ ಅನ್ನು ಅದ್ಬುತವಾಗಿ ನೋಡಬಹುದು. ಇದೀಗ ವಿಸ್ತಾರಗೊಂಡ ರಾಜಸೀಟು ತನ್ನ ಅಂದವನ್ನು ಹೆಚ್ಚಿಸಿ ಮಂಜಿನ ನಗರಕ್ಕೆ ಪ್ರವಾಸಿಗರನ್ನು ಕೈ ಬೀಸಿ ತನ್ನತ್ತ ಸೆಳೆಯುತ್ತಿದೆ .ಹೌದು ರಾಜಸೀಟು ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡಿದೆ.
ಮೊದಲು ಅರ್ಧ ಎಕರೆಯಲ್ಲಿದ್ದ ರಾಜಾಸೀಟ್ ಇದೀಗ ನಾಲ್ಕೂವರೆ ಎಕರೆಗೆ ವಿಸ್ತಾರ ಪಡೆದುಕೊಂಡಿದೆ. ರಾಜಾಸೀಟ್ನಲ್ಲಿ ಪ್ರಸ್ತುತ ಇರುವ ವ್ಯೂ ಪಾಯಿಂಟ್ ಜೊತೆಗೆ ಮತ್ತೇ ಮೂರು ವ್ಯೂ ಪಾಯಿಂಟ್ ಅನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ. ಈ ಯೋಜನೆಯೇ ಗ್ರೇಟರ್ ರಾಜಾಸೀಟ್ ಆಗಿದೆ.ಈ ಮೊದಲು ಕುರುಚಲು ಕಾಡುಗಳಿಂದ ಕೂಡಿದ್ದ ವಿಶಾಲ ಜಾಗವನ್ನು ಆಕರ್ಷಕವಾಗಿ ಪರಿವರ್ತಿಸಿ ಸಂಚರಿಸುವ ಜಾಗದಲ್ಲಿ ಇಂಟರ್ಲಾಕ್, ವಿವಿಧ ತಳಿಯ ಕಣ್ಮನ ಸೆಳೆಯುವ ಗಿಡಗಳು, ಮೆಟ್ಟಲುಗಳು, ಅಲಂಕಾರಿಕಾ ಮಂಟಪಗಳು, ೩ ಕಿ.ಮೀ. ವಾಕಿಂಗ್ ಪಾಥ್,ನಡುನಡುವೆ ಗಾರ್ಡನ್, ಕೂರಲು ಕಲ್ಲಿನ ಕುರ್ಚಿಗಳನ್ನು ನಿರ್ಮಿಸಿ ವಿಶೇಷವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.
ಮಕ್ಕಳ ಉದ್ಯಾನವನ:
ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ, ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ, ಉದ್ಯಾನ ವನದಲ್ಲಿ ಮಕ್ಕಳ ಮನೋರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿ ಹಾಗೂ ಶಿಲ್ಪ ಕಲಾ ಕೃತಿಗಳ ಅಳವಡಿಕೆ, ಉದ್ಯಾನ ವನದಲ್ಲಿ ವಿವಿಧ ಅಲಂಕಾರಿಕ ಹೂವಿನ ಕುಂಡಗಳು, ಕಸದ ಬುಟ್ಟಿ, ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ, ನೀರಾವರಿ ಅಳವಡಿಕೆ ಹಾಗೂ ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ.
ಬೆಟ್ಟದ ತುತ್ತ ತುದಿಯ ವ್ಯೂ ಪಾಯಿಂಟ್ ನೋಡಲು ಅದೆಷ್ಟೋ ಪ್ರವಾಸಿಗರು ಸಂಜೆ ಸೂರ್ಯಸ್ತಮಾನ ಸಮಯದಲ್ಲಿ ಬರುತ್ತಾರೆ. ಇಲ್ಲಿ ವಿಧವಿಧವಾದ ಹೂಗಳು , ಹೂದೋಟ ಪ್ರವಾಸಿಗರ ಮನ ಸೆಳೆಯುತ್ತದೆ. ಸಣ್ಣ ಮಕ್ಕಳಿಗಂತೂ ಇದು ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಪ್ರಾಣಿಗಳ ಸ್ಟಾಚು ಗಳನ್ನು ನಿರ್ಮಿಸಿದ್ದಾರೆ. ಆನೆ. ಹುಲಿ, ಝೀಬ್ರಾ,ಹಾವು, ಜಿರಾಫೆ, ಡೈನೊಸರ್, ಜಿಂಕೆ ಹಾಗೂ ಡ್ರಾಗನ್ ಗಳಂತಹ ಇನ್ನಿತರೆ ಪ್ರಾಣಿಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಬಂದು ಪ್ರಾಣಿಗಳ ಸ್ಟ್ಯಾಚು ಮುಂದೆ ಸೆಲ್ಫಿ ತೆಗೆದು ಸಂತಸಪಡುತ್ತಾರೆ.
ರಾಜಸೀಟ್ ವಾರದ ಎಲ್ಲಾ ದಿನವೂ ಬೆಳಿಂಗ್ಗೆ 5.30ರಿಂದ ರಾತ್ರಿ 8.೦೦ ಗಂಟೆಯವರೆಗೆ ತೆರೆದಿರುತ್ತದೆ. ಪ್ರಕೃತಿಯ ಸೌಂದರ್ಯವನ್ನ ಆಹ್ಲಾದಿಸಬೇಕಾ ಹಾಗಾದ್ರೆ ಒಮ್ಮೆ ರಾಜಾಸೀಟ್ ಗೆ ಭೇಟಿ ಕೊಡಿ..