ನ್ಯೂಸ್ ನಾಟೌಟ್ : ಅಭಿವೃದ್ಧಿ ಜಗದ ನಿಯಮ. ಪ್ರತಿ ದಿನ ಒಂದಲ್ಲ ಒಂದು ಹೊಸ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಆಧುನಿಕ ಯುಗ ಅಂದ್ರೆನೇ ಹಾಗೆ. ಆದರೆ ಕೆಲವೊಂದು ಸಲ ಅಭಿವೃದ್ಧಿ ಕೆಲಸಗಳು ಕೂಡ ಮನು ಕುಲಕ್ಕೆ ಮಾರಕವಾಗುತ್ತದೆ ಅನ್ನುವುದಕ್ಕೆ ಮಂಗಳೂರು- ನೆಲ್ಯಾಡಿ-ಬೆಂಗಳೂರು ಚತುಷ್ಪಥ ಹೆದ್ದಾರಿಯ ಕಾಮಗಾರಿಯೇ ಜ್ವಲಂತ ಉದಾಹರಣೆ.
ಮಂಗಳೂರಿನಿಂದ ನೆಲ್ಯಾಡಿ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ಹೆದ್ದಾರಿಯ ಕಾಮಗಾರಿ ಬರದಿಂದ ಸಾಗುತ್ತಿದೆ. ಜನರಿಗೆ ರಸ್ತೆ ಸಂಪರ್ಕ ಕಲ್ಪಿಸುತ್ತಿರುವುದು ಉತ್ತಮ ವಿಚಾರವೇ ಆಗಿದೆ. ಆದರೆ ಕಳೆದ ಕೆಲವು ತಿಂಗಳಿನಿಂದ ನೆಲ್ಯಾಡಿ, ಗೊಳಿತೊಟ್ಟು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಮಕ್ಕಳಿಗೆ, ಅಸ್ತಮಾ ಇರುವ ದೊಡ್ಡವರಿಗೆ, ಮಹಿಳೆಯರಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ ಅನ್ನುವ ದೂರುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ರಸ್ತೆಗೆ ಹಾಕುತ್ತಿರುವ ಕೆಮಿಕಲ್ ಮಿಶ್ರಿತ ಸಿಮೆಂಟ್. ಈ ಸಿಮೆಂಟ್ನ ಧೂಳು ಇಡೀ ವಾತಾವರಣ ಸೇರಿಕೊಳ್ಳುತ್ತಿದೆ. ಅಲ್ಲಿಂದ ಸುಲಭವಾಗಿ ಮನುಷ್ಯನ ಶ್ವಾಸಕೋಶಕ್ಕೆ ಸೇರಿಕೊಳ್ಳುತ್ತಿದೆ. ಹೀಗಾಗಿ ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಆಗಾಗ್ಗೆ ಕಂಡು ಬರುತ್ತಿದೆ. ಅದರಲ್ಲೂ ಉಸಿರಾಟಕ್ಕೆ ಸಂಬಂಧ ಪಟ್ಟ ಪ್ರಕರಣಗಳೇ ಹೆಚ್ಚಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಸ್ತಮಾದಿಂದ ಬಳಲುತ್ತಿರುವ ವ್ಯಕ್ತಿಗಳು ಈ ಕೆಮಿಕಲ್ ಧೂಳು ಸೇವಿಸಿದ್ದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎನ್ನಲಾಗಿದೆ. ರಸ್ತೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರು ಧೂಳನ್ನು ಹೋಗಲಾಡಿಸುವುದಕ್ಕಾಗಿ ನೀರು ಹಾಯಿಸಿದರೂ ಅದು ಪರಿಣಾಮಕಾರಿಯಾಗುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.