ನ್ಯೂಸ್ ನಾಟೌಟ್: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ ಅಂತಾರಾಜ್ಯ ದರೋಡೆಕೋರರ ತಂಡವನ್ನು ಸೆರೆ ಹಿಡಿಯಲಾಗಿದೆ. ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ಭಾರಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಮುಂಜಾಗ್ರತಾ ಕ್ರಮದಿಂದ ಭಾರಿ ಕಳ್ಳತನ ಪ್ರಕರಣದಿಂದ ಸ್ವಲ್ಪದರಲ್ಲೇ ತಪ್ಪಿದೆ. ಮಂಗಳವಾರ ಹಾಗೂ ಬುಧವಾರ (29/30-11-2022) ರಾತ್ರಿ ವೇಳೆಯಲ್ಲಿ ಮಂಗಳೂರು ನಗರದ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ “ ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ” ನ ವ್ಯಕ್ತಿಗಳು ತೊಕ್ಕೊಟ್ಟಿನ ಜ್ಯುವೆಲ್ಲರಿ ಅಂಗಡಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿನ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಭಾಸ್ಕರ ಬೆಳ್ಚಪಾಡ(65), ದಿನೇಶ್ ರಾವಲ್ , ಮೊಹಮ್ಮದ್ ಜಾಮೀಲ್ ಶೇಖ್(29), ಇಂಜಮಾಮ್ ಉಲ್ ಹಕ್(27), ಬಿಸ್ತ ರೂಪ್ ಸಿಂಗ್ (34), ಕೃಷ್ಣ ಬಹದ್ದೂರ್ ಬೋಗಟಿ, (41), ಇಮ್ದದುಲ್ ರಝಾಕ್ ಶೇಖ್(32), ಬಿವುಲ್ ಶೇಖ್ (31), ಇಮ್ರಾನ್ ಶೇಖ್(30) ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರೆಲ್ಲರೂ ಉತ್ತರ ಭಾರತ ಮೂಲದ ಕುಖ್ಯಾತ “ಸಾಹೇಬ್ ಗಂಜ್” ದರೋಡೆ ಗ್ಯಾಂಗ್ ನ ಸದಸ್ಯರಾಗಿದ್ದಾರೆ. ಮಂಗಳೂರು ತೊಕ್ಕೊಟ್ಟಿನ ಸೂಪರ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದು ನಂತರ ತೊಕ್ಕೊಟ್ಟು ಬಳಿಯ ಲಾಡ್ಜ್ ವೊಂದರಲ್ಲಿ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ದರೋಡೆಗೆ ಸಂಚು ರೂಪಿಸಿದ್ದರು ಅನ್ನುವುದು ತನಿಖೆಯಿಂದ ತಿಳಿದು ಬಂದಿದೆ. ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಪಿಎಸ್ಐ ರಾಜೇಂದ್ರ ಬಿ, ಪ್ರದೀಪ ಟಿ ಆರ್, ಎಎಸ್ಐ ಶಶಿಧರ ಶೆಟ್ಟಿ, ಮೋಹನ್ ಕೆ ವಿ, ಹರೀಶ ಪಿ ಹಾಗೂ ಸಿಸಿಬಿ ಸಿಬ್ಬಂದಿ ದರೋಡೆಕೋರರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.