ನ್ಯೂಸ್ ನಾಟೌಟ್ : “ಡಾ. ಕುರುಂಜಿ ವೆಂಕಟ್ರಮಣ ಗೌಡ ಸುಳ್ಯದ ಅಮರ ಶಿಲ್ಪಿ, ಇತಿಹಾಸ ಬರೆದ ಗಣ್ಯ ವ್ಯಕ್ತಿ. ಇವರ ಸಾಧನೆ ಮತ್ತು ಆದರ್ಶಗಳು ಇಂದಿಗೂ ಶಾಶ್ವತವಾಗಿದೆ. ಎಷ್ಟೋ ಮಕ್ಕಳಿಗೆ ಅಕ್ಷರದ ಅರಿವನ್ನು ನೀಡಲು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ನಿರ್ದಿಷ್ಟ ಗುರಿ ಕಡೆ ನಡೆದವರು. ಅಲ್ಲದೇ ರೋಗಿಗಳ ಸೇವೆಗಾಗಿ ಆಸ್ಪತ್ರೆಗಳನ್ನು ಕಟ್ಟಿಸಿ ಮಹತ್ತರ ಕಾರ್ಯಗಳನ್ನು ಮಾಡಿದವರು. ನಾನು ವೈದ್ಯನಾಗಿ ೩೫,೦೦೦ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿರುವ ತೃಪ್ತಿ ನನಗಿದೆ. ಕೊರೊನಾ ಹೆಮ್ಮಾರಿ ದೇಶ ವ್ಯಾಪಿಸಿದೆ ಹೇಳುತ್ತಾರೆ. ಆದರೆ ಇದೊಂದು ಶೀತ ಭಾದೆ ಇದ್ದ ಹಾಗೆ,ಇದಕ್ಕೆ ವಿಶೇಷ ಔಷಧಿಯೇನು ಇಲ್ಲ. ನಾನೊಬ್ಬ ವೈದ್ಯ,ವಿಜ್ಞಾನಿ ನೆಲೆಯಲ್ಲಿ ಧೈರ್ಯದಿಂದ ಹೇಳುತ್ತೇನೆ. ಕೊರೊನಾ ಹೆಸರಲ್ಲಿ ವೈದ್ಯಕೀಯ ಮಾಫಿಯಾ ನಡೆದಿದೆ ಎಂದು ಹೆಸರಾಂತ ವೈದ್ಯ ಡಾ.ಅಂಜನಪ್ಪ ಹೇಳಿದರು.
ಅವರು ಕೆವಿಜಿ ಸುಳ್ಯ ಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರೋಗಿಗಳಿಗೆ ವೈದ್ಯರೇ ದೇವರು. ಆಸ್ಪತ್ರೆಯನ್ನು ಕಟ್ಟಿಸಿ ಪ್ರಯೋಜನವಿಲ್ಲ,ರೋಗಿಗಳಿಗೆ ಉತ್ತಮ ಸೌಲಭ್ಯ ಮತ್ತು ಚಿಕಿತ್ಸೆಯನ್ನು ನೀಡಿದರೆ ಮಾತ್ರ ಒಬ್ಬ ವೈದ್ಯನು ದೇವರಾಗುತ್ತಾನೆ ಎಂದು ರೋಗಿ ಮತ್ತು ವೈದ್ಯರ ಸಂಬಂಧದ ಕುರಿತು ಮಹತ್ವಪೂರ್ಣ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕೆ.ವಿ.ಜಿ ಸಂಸ್ಮರಣೆ ಮತ್ತು ಕೆ.ವಿ.ಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ನಡೆಯಿತು. ವಿಶ್ರಾಂತ ಪ್ರಾಂಶುಪಾಲ ಪ್ರೊ .ಎಂ. ಬಾಲಚಂದ್ರ ಗೌಡ ಹಾಗೂ ಪರಿಸರ ತಜ್ಞ ಗ್ರೀನ್ ಹೀರೋ ಆಫ್ ಇಂಡಿಯಾ ಡಾ .ಆರ್.ಕೆ. ನಾಯರ್ ಅವರಿಗೆ ಕೆ.ವಿ.ಜಿ ಸಾಧನಾ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಸ್ವಾಗತಿಸಿದರು. ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ ಮುಖ್ಯ ಅತಿಥಿಯಾಗಿದ್ದರು. ಕೋಶಾಧಿಕಾರಿ ಆನಂದ ಖಂಡಿಗ, ಪ್ರಧಾನ ಕಾರ್ಯದರ್ಶಿ ಹರೀಶ್ ಉಬರಡ್ಕ ,ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.