ನ್ಯೂಸ್ ನಾಟೌಟ್ : ಕನ್ನಡ ಶಾಲೆಗಳ ಬೆಳವಣಿಗೆಯಿಂದ ಸಾಹಿತ್ಯ ಬೆಳವಣಿಗೆ ಆಗುವುದಕ್ಕೆ ಸಾಧ್ಯ ಎಂದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಅಧ್ಯಕ್ಷ ಡಾ ಕೆ.ವಿ ಚಿದಾನಂದ ಹೇಳಿದ್ದಾರೆ. ಅವರು ೨೬ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಕನ್ನಡ ಕಸ್ತೂರಿ ಸನ್ಮಾನ ನೀಡಿ ಮಾತನಾಡಿದರು.
ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ ಕೆ ವಿ ಚಿದಾನಂದ ಅವರು, ಕನ್ನಡ ಶಾಲೆಗಳು ಬಹುತೇಕ ಮುಚ್ಚುವ ಹಂತಕ್ಕೆ ಬಂದು ತಲುಪಿವೆ. ಇದರಿಂದ ಇಂದು ಮಕ್ಕಳು ಬೇರೆ ದಾರಿ ಇಲ್ಲದೆ ಇಂಗ್ಲಿಷ್ ಮಾಧ್ಯಮ ಶಾಲೆಗೆ ಹೋಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದುವರಿದು ಮಾತನಾಡಿದ ಅವರು, ಕನ್ನಡದ ಅರಿವು ಮತ್ತು ಶಾಲೆಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮಕ್ಕಳಲ್ಲಿ ಎಳೆವೆಯಲ್ಲಿಯೇ ಮೂಡಿಸಬೇಕು, ಇದರಿಂದ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ ಹೆಚ್ಚುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.