ವರದಿ:ನಿಶಾ,ಬೆಳ್ತಂಗಡಿ
ನ್ಯೂಸ್ ನಾಟೌಟ್: ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ‘ಶೂನ್ಯ ತ್ಯಾಜ್ಯ’ದತ್ತ ಗಮನವಿರಿಸಿದ್ದು ಕಂಬಳದ ಪ್ರಮುಖ ಆಕರ್ಷಣೆಯಾಗಿದೆ.ಹೌದು,ಮೂಡುಬಿದಿರೆ ಕಡಲಕರೆಯ ನಿಸರ್ಗಧಾಮದ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಇಪ್ಪತ್ತನೇ ವರ್ಷದ ಜೋಡುಕರೆ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳವನ್ನು ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಮೊದಲೇ ನಿರ್ಧಾರ ಮಾಡಲಾಗಿತ್ತು.
ಪ್ಲಾಸ್ಟಿಕ್ ಮುಕ್ತ ಕಂಬಳ:
ಮೂಡುಬಿದಿರೆ ಪುರಸಭೆ ಹಾಗೂ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶೂನ್ಯತ್ಯಾಜ್ಯವನ್ನಾಗಿಸುವ ಸಲುವಾಗಿ ಕಂಬಳಕ್ಕೆ ಆಗಮಿಸಿರುವ ವ್ಯಾಪಾರಸ್ಥರನ್ನು ಮುಂಚೆಯೇ ಸಭೆಯನ್ನು ಕರೆದು ತಿಳಿಸಲಾಗಿತ್ತು.ವ್ಯಾಪಾರಸ್ಥರೆಲ್ಲರಿಗೂ ಪ್ಲಾಸ್ಟಿಕ್ನ ಬದಲಾಗಿ ನೈಸರ್ಗಿಕದತ್ತ ವಸ್ತುಗಳಾದ ಅಡಿಕೆ ಹಾಳೆಯ ತಟ್ಟೆಗಳು, ಸಣ್ಣ ಬೌಲ್ ಹಾಗೂ ಗೆರಟೆಗಳನ್ನು ಬಳಸಿ ವ್ಯಾಪಾರ ನಡೆಸಿದರು.
ಉತ್ತಮ ಸ್ಪಂದನೆ:
ಕಲ್ಲಂಗಡಿ ಮಾರಾಟಗಾರರಿಗೆ ೧೦,೦೦೦ ಅಡಿಕೆ ಹಾಳೆಯ ತಟ್ಟೆ, ಸ್ವೀಟ್ ಕಾರ್ನ್ ಮಾರಾಟಗಾರರಿಗೆ ೫,೦೦೦ ಬೌಲ್ಗಳು ಹಾಗೂ ೪,೦೦೦ ಅದಕ್ಕಿಂತ ದೊಡ್ಡ ಬೌಲ್ಗಳನ್ನು ಈಗಾಗಲೇ ಕಡಿಮೆ ದರದಲ್ಲಿ ನೀಡಲಾಗಿದೆ. ಐಸ್ ಕ್ರೀಂ ವ್ಯಾಪಾರಸ್ಥರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಪೆನ್ನುಗಳ ಬದಲಿಗೆ ಪೇಪರ್ ಪೆನ್ನನ್ನು ಮಾರಾಟ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮುಕ್ತ, ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಇಲ್ಲಿಗೆ ಆಗಮಿಸಿದ ವ್ಯಾಪಾರಸ್ಥರು ಸಂಪೂರ್ಣವಾಗಿ ಸಹಕಾರವನ್ನು ನೀಡಿದರು. ಇಲ್ಲಿಗೆ ಬರುವ ಕಂಬಳಭಿಮಾನಿಗಳು ಕೂಡಾ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡಿದರು.
ಪುರಸಭಾಧ್ಯಕ್ಷರ ಮನವಿ:
ಅಡಿಕೆ ಹಾಳೆಗಳು, ಬೌಲ್ಗಳು ಖಾಲಿಯಾದರೂ ಪೂರೈಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ.ಪುರಸಭಾಧ್ಯಕ್ಷರಾದ ಪ್ರಸಾದ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ವ್ಯಾಪಾರಸ್ಥರು ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಸಂಪೂರ್ಣವಾಗಿ ಸಹಕಾರವನ್ನು ನೀಡಿದ್ದು, ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ನೈಸರ್ಗಿಕವಾಗಿ ದೊರೆಯುವ ಅಡಿಕೆ ಹಾಳೆಗಳ ಬೌಲ್, ತಟ್ಟೆ, ಸ್ಟೀಲ್ ಲೋಟ, ಬಟ್ಟಲು ಹಾಗೂ ಗ್ಲಾಸುಗಳನ್ನು ಬಳಕೆ ಮಾಡುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಕಂಬಳಾಭಿಮಾನಿಗಳು ಆದಷ್ಟು ಮನೆಯಿಂದಲೇ ಕೈಚೀಲವನ್ನು ತಂದು ಸಹಕರಿಸಬೇಕು. ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಕಂಬಳಾಭಿಮಾನಿಗಳು ಸಂಪೂರ್ಣವಾಗಿ ಬೆಂಬಲವನ್ನು ನೀಡಬೇಕೆಂದರು.
ಶೂನ್ಯ ತ್ಯಾಜ್ಯ ಕಂಬಳಕ್ಕೆ ಸಾಥ್ :
ಸ್ವಚ್ಛತಾ ರಾಯಭಾರಿಗಳಾದ ಜೈನ ಪದವಿ ಪೂರ್ವ ಕಾಲೇಜಿನ ಸಂಧ್ಯಾ ಅವರು ಶೂನ್ಯ ತ್ಯಾಜ್ಯ ಕಂಬಳದ ಬಗ್ಗೆ ವಿಶೇಷ ಕಾಳಜಿಯನ್ನು ತೋರಿದ್ದು ತಮ್ಮ ವಿದ್ಯಾರ್ಥಿಗಳನ್ನು ಜತೆಗೂಡಿಸಿಕೊಂಡು, ಕಂಬಳಾಭಿಮಾನಿಗಳು ಆದಷ್ಟು ಕೈಚೀಲವನ್ನು ತಂದು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಇನ್ನೋರ್ವ ಸ್ವಚ್ಛತಾ ರಾಯಭಾರಿಯಾದ ಗೋಪಾಲ ಅವರು ಶೂನ್ಯ ತ್ಯಾಜ್ಯದ ಕಂಬಳದಲ್ಲಿ ವ್ಯಾಪಾರಸ್ಥರಿಗೆ ಮುಂಚೆಯೇ ಮಾಹಿತಿಯನ್ನು ನೀಡಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮುಕ್ತ ಶೂನ್ಯ ತ್ಯಾಜ್ಯ ಕಂಬಳಕ್ಕೆ ಸಾಥ್ ನೀಡಿದ್ದಾರೆ.
ಈ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಕಂಬಳ ಸಮಿತಿ ಹಾಗೂ ಪುರಸಭೆಯು ಸಂಪೂರ್ಣವಾಗಿ ಸಹಕಾರವನ್ನು ನೀಡಿದ್ದು ಈ ಬಾರಿಯ ಕಂಬಳವು ವಿಶೇಷವಾಗಿ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ವಿಶೇಷ ಪ್ರಯತ್ನ ನಡೆಸಿದೆ.