ನ್ಯೂಸ್ ನಾಟೌಟ್ : ಎಲ್ಲಿ ನೋಡಿದರೂ ಬಣ್ಣ ಬಣ್ಣದ ಹೂಗಳು.ಜನರ ಚಿತ್ತಾಕರ್ಷಿಸುತ್ತಿದೆ ಬಗೆ ಬಗೆ ಹೂಗಳು. ಒಂದು ಕ್ಷಣ ಕಣ್ಣು ಹಾಯಿಸಿದರೆ ಇದು ಹೂವಿನ ಲೋಕವೇ ಎಂದು ಭಾಸವಾಗುತ್ತದೆ. ಈ ಹೂಗಳ ರಾಶಿ ನಿಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದು ಕೊಂಡು ಹೋಗುತ್ತದೆ.
ದೇಶದಲ್ಲೇ ಮೊದಲು :
ಹೌದು, ಇಂದಿನಿಂದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಜೈನ ಕಾಶಿ ಬಸದಿಗಳ ನಾಡೆಂದೆ ಪ್ರಸಿದ್ಧಿಯನ್ನು ಪಡೆದಿರುವ ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ ಸಜ್ಜಾಗಿದೆ. ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಮೊಟ್ಟ ಮೊದಲ ಬಾರಿಗೆ ಸಾಂಸ್ಕೃತಿಕತೆಯನ್ನು ವೈಭವಿಕರೀಸುವ ಪರಿಚಯಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ತಯಾರಿಯು ಭರ್ಜರಿಯಾಗಿ ನಡಿದಿದ್ದು,ಜನರನ್ನು ಕೈ ಬೀಸಿ ಕರಿತಿದೆ. ಈ ಜಾಂಬೂರಿಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ವಿವಿಧ ರಾಷ್ಟ್ರಗಳಿಂದ ವಿದ್ಯಾರ್ಥಿಗಳು, ತರಬೇತುದಾರರು ಆಗಮಿಸುತ್ತಿದ್ದಾರೆ. ಕಲಾ ವೈಭವ , ಸಸ್ಯೋದ್ಯಾನ ತಯಾರಿ ನೋಡುಗರನ್ನು ಬೆರಗುಗೊಳಿಸುವಂತಿದೆ.
ಇಂದಿನಿಂದ ಒಂದು ವಾರ ಸಂಭ್ರಮ:
ಇಂದಿನಿಂದ ಒಂದು ವಾರಗಳ ಕಾಲ ನುಡಿಸಿರಿ, ವಿರಾಸತ್ ಮೂಲಕ ಸುದ್ದಿ ಮಾಡುತ್ತಿದ್ದ ಆಳ್ವಾಸ್ ಈ ಬಾರಿ ಅದೆಲ್ಲಕ್ಕೂಒಂದು ಹೆಜ್ಜೆ ಮುಂದೆ ಹೋಗಿ ಅಂತರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ಸಜ್ಜಾಗಿದೆ.ದೇಶದ ವಿವಿಧ ರಾಜ್ಯಗಳ ಅಪರೂಪದ ಸಸ್ಯ ಸಂಪತ್ತಿನೊಂದಿಗೆ, ಹೊರದೇಶಗಳ ಅದ್ಭುತ ಆಕರ್ಷಕ ಹೂವಿನ ಗಿಡಗಳು ಮೂಡುಬಿದಿರೆಯ ಮಣ್ಣಿನಲ್ಲಿ ತನ್ನ ಸೊಬಗನ್ನು ಹೆಚ್ಚಿಸಿದೆ. ಇಲ್ಲಿನ ಹವಾಮಾನ, ವಾತಾವರಣದಲ್ಲಿ ಅಸಾಧ್ಯ ಎಂಬಂತಿರುವ ಸಸ್ಯಗಳು ಇಂದು ಸಮೃದ್ಧವಾಗಿ ಬೆಳೆದು ಹೂವಿನ ರಾಶಿಯೊಂದಿಗೆ ಸುವಾಸನೆಯನ್ನು ಬೀರುತ್ತಾ ಆಕರ್ಷಕವಾಗಿ ಮಿಂಚುತ್ತಿದೆ.
ಹೂಗಳಲ್ಲಿ ಅರಳಿದ ಪ್ರಾಣಿಗಳು:
ಭಿನ್ನ ವಿಭಿನ್ನವಾದ ಸುಂದರ ಕುಸುಮಗಳು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಪ್ರತಿಯೊಬ್ಬರೂ ಹೂಗಳ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ನೂರು ಎಕರೆ ಆವರಣದಲ್ಲಿ ಎಲ್ಲಿ ನೋಡಿದರಲ್ಲಿ ವರ್ಣ ವೈವಿಧ್ಯದ ಹೂಗಳು ತನ್ನ ಸೌಂದರ್ಯ ಪ್ರದರ್ಶನದಿಂದ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿವೆ. ೨೫ ವಿವಿಧ ತಳಿಗಳ ೩೦೦ ಅತ್ಯಂತ ವಿರಳ ಗಿಡಗಳು ಈ ಪುಷ್ಪಮೇಳದಲ್ಲಿ ಪ್ರಧಾನ ಆಕರ್ಷಣೆಗೆ ಪಾತ್ರವಾಗುತ್ತಿದೆ. ಒಂದು ನಿರ್ದಿಷ್ಟ ಅವಧಿಯಲ್ಲಷ್ಟೇ ಪುಷ್ಪಗಳಿಂದ ಶೃಂಗಾರಗೊಳ್ಳುವ ೩೫ ಜಾತಿಗಳ ೫೦೦೦ ಪುಟಾಣಿ ಸಸ್ಯಗಳು ಆಕರ್ಷಕವಾಗಿ ಕಂಗೊಳಿಸಿವೆ. ಪುಟಾಣಿ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಪುಷ್ಪಗಳಿಂದ ಅಲಂಕರಿಸಿದ ಆನೆ,ಹುಲಿ, ಚಿಟ್ಟೆ,ಕುದುರೆ, ಜಿರಾಫೆ, ಮಂಗ,ಹಂಸ,ಜಾಂಬೂರಿಯನ್ನೊಳಗೊಂಡ ದೊಡ್ಡ ಪುಷ್ಪ ರಾಶಿಯೇ ಇಲ್ಲಿದೆ . ಈ ಮೇಳದ ವಿಶೇಷತೆಯೇನೆಂದರೆ ಇಂತಹ ನೂರರಷ್ಟು ಆಕೃತಿಗಳು ಪುಷ್ಪ ಪ್ರದರ್ಶನದ ಆಕರ್ಷಣೆಯ ಕೇಂದ್ರವಾಗಿದೆ.
ವಿದೇಶಿ ಹೂಗಳ ದರ್ಬಾರ್ :
ಈ ಜಾಂಬೂರಿಯಲ್ಲಿ ಎರಡು ಲಕ್ಷಗಳಷ್ಟು ಅಧಿಕ ವಿದೇಶಿ ಸಸ್ಯಗಳು ತನ್ನ ಸೌಂದರ್ಯವನ್ನು ಪ್ರದರ್ಶಿಸಿ ಜನರು ಮಾರು ಹೋಗುವಂತೆ ಮಾಡುತ್ತಿದೆ. ಅಮೇರಿಕಾ, ಹಾಲೆಂಡ್, ಜಪಾನ್, ಮಲೇಷ್ಯಾ, ಥಾಯ್ಲ್ಯಾಂಡ್ ಮೊದಲಾದ ಕಡೆಗಳಿಂದ ಹೂಗಿಡಗಳ ಬೀಜಗಳನ್ನು ತಂದು ಬೆಳಗಾಂ ಹಾಗೂ ಪೂನದಲ್ಲಿ ಸಸ್ಯಾಭಿವೃದ್ಧಿಗೊಳಿಸಿ ಅಲ್ಲಿಂದ ವಿದ್ಯಾಗಿರಿಯ ಸಸ್ಯಪ್ರದರ್ಶನಕ್ಕೆ ತಂದಿಡಲಾಗಿದೆ. ಸುಮಾರು ಎರಡು ಲಕ್ಷ ಸಸ್ಯಗಳು ಅಲ್ಲಿಂದ ಇಲ್ಲಿಗೆ ಆಗಮಿಸಿವೆ!. ವಿವಿಧ ವರ್ಣಗಳ ಅಪರೂಪದ ಲಿಲ್ಲಿ ಗಿಡಗಳು, ಚೆಂಡು ಹೂವು, ಜೀನಿಯಾ, ಗುಲಾಬಿ ಸೇರಿದಂತೆ ಹಲವು ಆಕರ್ಷಕ ಕ್ರೋಟನ್ ಮಾದರಿಯ ಗಿಡಗಳು ಪ್ರದರ್ಶನದಲ್ಲಿ ಮೇಳೈಸುತ್ತಿವೆ. ಇಡೀ ಪ್ರದರ್ಶನದಲ್ಲಿ ಮೂರು ಲಕ್ಷಕ್ಕೂ ಅಧಿಕ ಹೂ ಗಿಡಗಳು ಇದ್ದು ಕ್ಯಾಂಪಸ್ನ ಖಾಲಿ ಜಾಗಗಳಲ್ಲಿ ಕೆಂಪು, ಕೇಸರಿ, ಹಳದಿ ಗೊಂಡೆಹೂವುಗಳು ಸುಂದರ ಹೂ ತೋಟದೊಂದಿಗೆ ಆಕರ್ಷಿಸುತ್ತಿದೆ.ಒಟ್ಟಿನಲ್ಲಿ ಆಳ್ವಾಸ್ ನ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಈ ಸಂಭ್ರಮ ಮುಗಿಲು ಮುಟ್ಟಿದೆ.