ನ್ಯೂಸ್ ನಾಟೌಟ್ : ಗಡಾಯಿ ಕಲ್ಲು ಈ ಹೆಸರನ್ನು ಕೇಳದವರ ಸಂಖ್ಯೆ ತುಂಬಾನೇ ವಿರಳ.ಬೆಳ್ತಂಗಡಿಯಲ್ಲಿರುವ ಬಹುದೊಡ್ಡ ಪ್ರವಾಸಿ ತಾಣಗಳಲ್ಲಿ ಇದು ಕೂಡ ಒಂದು.ಮಂಗಳೂರು ಅಥವಾ ಮೂಡುಬಿದಿರೆಯಿಂದ ಧರ್ಮಸ್ಥಳಕ್ಕೆ ಸಾಗುವ ಮಾರ್ಗದಲ್ಲಿ ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ರಸ್ತೆಯ ಎಡ ಭಾಗದಲ್ಲಿ ರಸ್ತೆಯುದ್ದಕ್ಕೂ ಕಾಣುವ ಈ ಬೃಹತ್ ಕಲ್ಲು ನೋಡುಗರ ಕಣ್ಮನ ಸೆಳೆಯುತ್ತದೆ. ಒಂಟಿಯಾಗಿ ನಿಂತಿರುವ ಬೃಹತ್ ಕರಿದಾದ ಬೆಟ್ಟವೊಂದು ಸೂಜಿಗಲ್ಲಿನಂತೆ ಜನರನ್ನು ಆಕರ್ಷಿಸುತ್ತದೆ. ಅದುವೇ ಇತಿಹಾಸ ಪ್ರಸಿದ್ಧ ಬೆಟ್ಟದ ಕೋಟೆ ‘ಗಡಾಯಿಕಲ್ಲು’.
ಚಾರಣಿಗರ ಪಾಲಿನ ಸ್ವರ್ಗ:
ಚಾರಣಿಗರ ಪಾಲಿಗೆ ಇದು ಸ್ವರ್ಗವಿದ್ದಂತೆ. ಬೆಳ್ತಂಗಡಿಯ ಐತಿಹಾಸಿಕ ತಾಣ ನರಸಿಂಹ ಗಡವನ್ನು ವೀಕ್ಷಿಸಲು ಹಾಗೂ ಟ್ರಕ್ಕಿಂಗ್ ಗಾಗಿ ಇಲ್ಲಿ ಬಂದು ನೂರಾರು ಜನರು ಪ್ರಕೃತಿ ಸೌಂದರ್ಯವನ್ನು ಆಹ್ಲಾದಿಸುತ್ತಾರೆ. ‘ಕುದುರೆಮುಖ’ ಪರ್ವತ ಶ್ರೇಣಿಯ ಭಾಗದಲ್ಲಿರುವ ಇದು, ಸಮುದ್ರ ಮಟ್ಟದಿಂದ ಸುಮಾರು 1,700 ಅಡಿ ಎತ್ತರದಲ್ಲಿದೆ. ಪ್ರಾದೇಶಿಕವಾಗಿ ಇಲ್ಲಿನ ಜನರು ಈ ಕೋಟೆಯನ್ನು ‘ಗಡಾಯಿಕಲ್ಲು’, ‘ಜಮಲಾಬಾದ್’, ‘ಜಮಲಾಗದ್ದ’ ಮತ್ತು ‘ನರಸಿಂಹಗಡ’ ಎಂದೂ ಕರೆಯುತ್ತಾರೆ.
ಆನ್ ಲೈನ್ ನಲ್ಲಿ ಟಿಕೆಟ್ ವ್ಯವಸ್ಥೆ:
ಇನ್ನು ಮುಂದೆ ಇತಿಹಾಸ ಪ್ರಸಿದ್ದ ಪ್ರವಾಸಿ ತಾಣಕ್ಕೆ ತೆರಳುವವರಿಗೆ ಹಲವು ಅನುಕೂಲಗಳನ್ನು ಮಾಡಿಕೊಡಲಾಗಿದೆ.ನರಸಿಂಹಘಡದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ವೀಕ್ಷಣೆಗಾಗಿ ಅಂತರ್ಜಾಲ ಮೂಲಕ ಪ್ರವೇಶ ಚೀಟಿಯನ್ನು ಪಡೆಯುವ ವ್ಯವಸ್ಥೆ ಮಾಡಲಾಗಿದೆ.ಕುದುರೆಮುಖ ನ್ಯಾಷನಲ್ ಪಾರ್ಕ್ ಡಾಟ್ ಇನ್ ವೆಬ್ ಸೈಟಿನಲ್ಲಿ ಆನ್ ಲೈನ್ ಬುಕ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ನೋಡುಗರಿಗೆ ಆಕರ್ಷಕವಾಗಿ ಕಾಣುವ ಈ ಗಡಾಯಿಕಲ್ಲಿನಲ್ಲಿ ಪ್ರಾರಂಭದಲ್ಲಿ ಕಾಡಿನ ಕಡಿದಾದ ದಾರಿ, ನಂತರ ಕಲ್ಲಿನ ಮೆಟ್ಟಿಲು ಏರಿದ ಮೇಲೆ, ಕೊನೆಗೆ ಕಲ್ಲನ್ನೇ ಕೆತ್ತಿ ನಿರ್ಮಿಸಿದ ಸುಮಾರು 1876 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಬೇಕು. ದಾರಿ ಮಧ್ಯದಲ್ಲಿ ಅಲ್ಲಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿಶ್ರಾಂತಿಯ ಸ್ಥಳಗಳನ್ನು ಅರಣ್ಯ ಇಲಾಖೆ ನಿರ್ಮಿಸಿದೆ.ಹೀಗಾಗಿ ಚಾರಣಿಗರು ದಣಿವಾರಿಸಿಕೊಳ್ಳಲು ಈ ವ್ಯವಸ್ಥೆಗಳನ್ನು ಸುದುಪಯೋಗ ಪಡಿಸಿಕೊಳ್ಳಬಹುದು.
ಟಿಕೆಟ್ ನೀಡದೆ ಹಣ ವಸೂಲಿ ದೂರು:
ಕೆಲವು ವಾರಗಳ ಹಿಂದೆ ಇಲ್ಲಿ ವನ್ಯಜೀವಿ ಅಧಿಕಾರಿಗಳು ಪ್ರವಾಸಿಗರಿಗೆ ಟಿಕೇಟ್ ನೀಡದೇ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ವ್ಯಕ್ತವಾಗಿದ್ದವು.ಸಾರ್ವಜನಿಕರ ದೂರು ಹಿನ್ನಲೆಯಲ್ಲಿ ಮಾಹಿತಿ ತಿಳಿದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸ್ಥಳಕ್ಕಾಗಮಿಸಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಸೂಚಿಸಿದ್ದರು. ಅಂತೆಯೇ ವನ್ಯ ಜೀವಿ ವಿಭಾಗದ ಬೆಳ್ತಂಗಡಿ ವಲಯ ಆರ್ ಎಫ್ ಓ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರವಾಸಿಗರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.ಹಿರಿಯ ಅಧಿಕಾರಿಗಳು, ವನ್ಯ ಜೀವಿ ಕಾರ್ಕಳ ವಿಭಾಗದ ಡಿಎಫ್ಒ,ಎಸಿಎಫ್ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿ ಇಲ್ಲಿಗೆ ಯಾವ ರೀತಿ ವ್ಯವಸ್ಥೆ ಕಲ್ಪಿಸಿಕೊಡಬಹುದು ಎಂದು ಚರ್ಚಿಸಿ ತೀರ್ಮಾನಕ್ಕೆ ಬಂದು ಇಲ್ಲಿಗೊಂದು ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಕುಡಿಯುವ ನೀರು,ಶೌಚಾಲಯ ವ್ಯವಸ್ಥೆ:
ಸಮುದ್ರ ಮಟ್ಟದಿಂದ ಸುಮಾರು 1700 ಅಡಿಗಳಿಗಿಂತಲೂ ಎತ್ತರವಿರುವ ಈ ಶಿಖರ ಏರುವುದೇ ಒಂದು ಸಾಹಸದಂತೆ.ಕಲ್ಲಿನಿಂದಲೇ ಕೆತ್ತಿರುವ ಸಾವಿರಾರು ಮೆಟ್ಟಿಲುಗಳನ್ನು ಏರಬೇಕು.ಜಮಾಲಾಬಾದ್ ಗೆ ಹೋಗಿ ಬರಬೇಕಾದರೆ ಕನಿಷ್ಟ ಅಂದರೂ 3 ಗಂಟೆಗಳಾದರೂ ಬೇಕೆ ಬೇಕು.ಹೀಗಾಗಿ ಚಾರಣಿಗರು ಸುಸ್ತಿಗೆ ಬೀಳುವ ಸಂಭನೀಯತೆ ಹೆಚ್ಚು.ಹಾಗಾಗಿ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆಗಳಾಗಬೇಕು ಎನ್ನುವ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಹಿಳೆಯರಿಗಾಗಿ ಶೌಚಾಲಯದ ವ್ಯವಸ್ಥೆ ಕೂಡ ಸಮರ್ಪಕವಾಗಿರಲಿದೆ.
ಜೀವಂತ ಕೆರೆ:
ಕೋಟೆಯ ತಳವು ಸುಮಾರು 4 ರಿಂದ 5 ಕಿ.ಮೀನಷ್ಟು ವ್ಯಾಪ್ತಿಯಲ್ಲಿ ಹರಡಿ ಕೊಂಡಿದ್ದು, ಕೋಟೆಯ ಮೇಲ್ಭಾಗ ಸುಮಾರು ಒಂದರಿಂದ ಎರಡು ಎಕರೆಯಷ್ಟು ವಿಶಾಲವಾಗಿದೆ. ಈ ಜಾಗವು ಬೃಹತ್ ಗಾತ್ರದ ಮರಗಳು ಹಾಗೂ ಕುರುಚಲು ಗಿಡಗಳಿಂದ ಕೂಡಿದೆ. ಬೆಟ್ಟದ ಮಧ್ಯದಲ್ಲಿ ಕಲ್ಲಿನಲ್ಲೇ ನಿರ್ಮಾಣಗೊಂಡ ಕೆರೆಯೊಂದಿದ್ದು, ಎಂತಹ ಬೇಸಿಗೆಯಲ್ಲೂ ಈ ಕೆರೆಯು ಬತ್ತದೇ ತನ್ನೊಡಲಲ್ಲಿ ನೀರನ್ನು ಉಳಿಸಿಕೊಂಡು ವರ್ಷದ 365 ದಿನವೂ ಈ ಕೆರೆಯಲ್ಲಿ ನೀರು ತುಂಬಿಕೊಂಡಿರವುದು ವಿಶೇಷ.
ಪ್ರವಾಸಿಗರ ಹಾಟ್ ಫೇವರಿಟ್ ಆಗಿರುವ ‘ಗಡಾಯಿಕಲ್ಲು‘ ಅದರದ್ದೇ ಆದ ಇತಿಹಾಸವಿದೆ.ಹಲವು ವೈಶಿಷ್ಟ್ಯತೆಗಳನ್ನೊಳಗೊಂಡ ಈ ಸ್ಥಳಕ್ಕೆ ಭೇಟಿ ನೀಡುವುದೇ ಒಂದು ಆನಂದ.ಈ ಆಕರ್ಷಕ ತಾಣದಲ್ಲಿ ಇದಿಗ ಸುಧಾರಣೆಗಳಾಗಿರುವುದು ಚಾರಣಿಗರಿಗೆ ಒಂದು ಖುಷಿಯ ವಿಚಾರ.