ನ್ಯೂಸ್ ನಾಟೌಟ್ : ಕಾಡುಪಂಜ-ಊರುಪಂಜ ನಡುವಿನ ಸಂಪರ್ಕ ಸೇತುವೆಯ ಕನಸು ಕೊನೆಗೂ ಈಡೇರಿದೆ. ಸುಮಾರು ಎರಡೂವರೆ ದಶಕಗಳಿಂದ ಜನರ ಆಗ್ರಹ ಇದೀಗ ಕಾರ್ಯ ರೂಪಕ್ಕೆ ಬಂದಿದೆ. ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಈ ಸಂಪರ್ಕ ಸೇತುವೆ ನಿರ್ಮಾಣವಾಗಲಿದೆ. ಸುಳ್ಯ ಶಾಸಕ ಹಾಗೂ ಹಾಲಿ ಸಚಿವ ಎಸ್. ಅಂಗಾರ ಅವರು ಸೋಮವಾರ ಶಿಲಾನ್ಯಾಸ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಕಾಡುಪಂಜ-ಊರುಪಂಜದಲ್ಲಿ ಹಲವಾರು ಮನೆಗಳಿವೆ. ಈ ಮನೆಯವರು ಸಣ್ಣ ಕೆಲಸಕ್ಕೂ ೧೦ ಕಿ.ಮೀ. ಸುತ್ತಿ ಬಳಸಿಕೊಂಡು ಬಾಲಂಬಿ ಮೂಲಕ ಸಂಪಾಜೆಯ ಕಲ್ಲುಗುಂಡಿಗೆ ಬರುತ್ತಿದ್ದರು. ಅನಾರೋಗ್ಯ ಪೀಡಿತರು, ಮಹಿಳೆಯರು ಹಾಗೂ ಶಾಲಾ ಮಕ್ಕಳಿಗೆ ಪೇಟೆಗೆ ಬರುವುದೇ ಕಷ್ಟದ ಪರಿಸ್ಥಿತಿ ಇತ್ತು. ಹೀಗಾಗಿ ಎರುಕಡುಪು ಎಂಬಲ್ಲಿ ಸೇತುವೆ ನಿರ್ಮಾಣ ಆಗಬೇಕು, ಸೇತುವೆ ನಿರ್ಮಾಣ ಆದರೆ ಕೇವಲ ೧ ಕಿ.ಮೀ. ಪ್ರಯಾಣಿಸಿದರೆ ಕಲ್ಲುಗುಂಡಿ ಪೇಟೆಗೆ ಸಂಪರ್ಕವಾಗುತ್ತದೆ. ಇದರಿಂದ ಸುತ್ತಿ ಬಳಸಿಕೊಂಡು ಬರುವುದು ತಪ್ಪುತ್ತದೆ ಅನ್ನುವುದು ಊರಿನವರ ಅಭಿಪ್ರಾಯವಾಗಿತ್ತು. ಆದರೆ ಸೂಕ್ತ ಅನುದಾನದ ಕೊರತೆಯಿಂದ ಈ ಸೇತುವೆ ನಿರ್ಮಾಣ ಮಾಡುವುದಕ್ಕೆ ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಸಚಿವ ಅಂಗಾರ ಅವರ ಪ್ರಯತ್ನದಿಂದ ಕಾಡುಪಂಜ-ಊರುಪಂಜದ ಜನರ ಬಹು ದಿನಗಳ ಕನಸು ನನಸಾಗಿದೆ ಎಂದು ಗ್ರಾಮಸ್ಥರಾದ ನಾಗೇಶ್ ಕಾಡುಪಂಜ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಎಸ್ . ಅಂಗಾರ ಅವರಿಗೆ ಕುಟುಂಬಸ್ಥರ ಸಮ್ಮುಖದಲ್ಲಿ ಚಿತ್ರಕಲಾವಿದ ಮನೀಶ್ ಕಾಡುಪಂಜ ಅವರು ಬಿಡಿಸಿದ ಅಂಗಾರ ಅವರ ಭಾವಚಿತ್ರವಿರುವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಶಿವಾನಂದ ಕುಕ್ಕುಂಬಳ್ಳ, ವೆಂಕಟ್ರಮಣ ಪೆತ್ತಾಜೆ, ಕೇಶವ ಅಡ್ತಲೆ, ಉಷಾ, ಕಾಡುಪಂಜ ದೈವಸ್ಥಾನದ ಅಧ್ಯಕ್ಷರಾದ ಕೆ. ಪ್ರಭಾಕರ, ಸೀತಾರಾಮ ಕಾಡುಪಂಜ, ಮನೋಜ್ ಕೆ.ಎಸ್.ಉಪಸ್ಥಿತರಿದ್ದರು.