ನ್ಯೂಸ್ ನಾಟೌಟ್: ಹೊಸದಾಗಿ ಮನೆಗೆ ವಾಹನ ಖರೀದಿಸಿದಾಗ ಅದನ್ನು ಮೊದಲು ದೇವಸ್ಥಾನಕ್ಕೆ ತೆಗೆದುಕೊಂಡು ಬಂದು ಪೂಜೆ ಸಲ್ಲಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಹೊಸ ಹೆಲಿಕಾಪ್ಟರ್ ಅನ್ನೇ ದೇವಸ್ಥಾನಕ್ಕೆ ತಂದು ಭಾರಿ ಸುದ್ದಿಯಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್ನ ಉದ್ಯಮಿಯೊಬ್ಬರು ತಾವು ಖರೀದಿಸಿದ ಹೊಸ ಖಾಸಗಿ ಹೆಲಿಕಾಪ್ಟರ್ಗೆ ಪೂಜೆ ಮಾಡುವ ಸಲುವಾಗಿ ಹೆಲಿಕಾಪ್ಟರ್ ಅನ್ನೇ ದೇಗುಲದ ಬಳಿ ತರುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಬೊನ್ನಿಪಲ್ಲಿ ಶ್ರೀನಿವಾಸ್ ರಾವ್ ಎಂಬುವವರೇ ಹೀಗೆ ತಮ್ಮ ಹೆಲಿಕಾಪ್ಟರ್ ಅನ್ನು ಮೊದಲ ಪೂಜೆಗಾಗಿ ದೇಗುಲದ ಬಳಿ ಕರೆ ತಂದಿರುವ ಉದ್ಯಮಿ. ಪ್ರತಿಮಾ ಗ್ರೂಪ್ ಎಂಬ ಸಂಸ್ಥೆಯ ಮಾಲೀಕರಾಗಿರುವ ಶ್ರೀನಿವಾಸ್ ರಾವ್ ಅವರು ವಾಹನ ಪೂಜೆಗಾಗಿ ತಮ್ಮ ಹೊಸ ಹೆಲಿಕಾಪ್ಟರ್ ACH-135 ನ್ನು ಯದದ್ರಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲಕ್ಕೆ ತಂದಿದ್ದಾರೆ. ಹೈದರಾಬಾದ್ನಿಂದ 100 ಕಿಲೋ ಮೀಟರ್ ದೂರದಲ್ಲಿರುವ ಯದದ್ರಿಯ ದೇಗುಲಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಶ್ರೀನಿವಾಸ್ ರಾವ್ ಅವರು ದೇಗುಲದ ಅರ್ಚಕರ ಮೂಲಕ ಹೆಲಿಕಾಪ್ಟರ್ಗೆ ವಿಶೇಷ ಪೂಜೆ ಮಾಡಿದ್ದಾರೆ. ಉದ್ಯಮಿ ಹಾಗೂ ಅವರ ಕುಟುಂಬದವರು ಈ ಪೂಜೆಯಲ್ಲಿ ಭಾಗಿಯಾಗಿದ್ದರು. ಮೂವರು ಅರ್ಚಕರ ಪೌರೋಹಿತ್ಯದಲ್ಲಿ ಈ ಹೊಸ ಹೆಲಿಕಾಪ್ಟರ್ಗೆ ಯದದ್ರಿಯ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇಗುಲದಲ್ಲಿ ಮೊದಲ ಪೂಜೆ ನಡೆಯಿತು. ಹೆಲಿಕಾಪ್ಟರ್ ಮುಂದೆ ಅರ್ಚಕರು ಎಲ್ಲಾ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿದರು. ಈ ಹೆಲಿಕಾಪ್ಟರ್ನ ಮೌಲ್ಯ 5.7 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.