ನ್ಯೂಸ್ ನಾಟೌಟ್ : ಕಾಲೇಜಿಗೆ ಓದುವುದಕ್ಕೆ ಹೋಗುವ ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನಿಗೆ ಪ್ರೇಮ ಪತ್ರ ಬರೆದಿರುವ ಘಟನೆ ವಿಟ್ಲದಿಂದ ವರದಿಯಾಗಿದೆ. ಈ ಘಟನೆ ಕಾವೇರುತ್ತಿದ್ದಂತೆ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ಕೂಡ ಘಟನೆಯನ್ನು ಕಟು ಪದಗಳಿಂದ ಟೀಕಿಸಿದ್ದಾರೆ. ಸದ್ಯ ಪ್ರೇಮ ಪ್ರಕರಣ ವಿಚಾರದಲ್ಲಿ ಸಹಕರಿಸಿದ ಹಾಗೂ ವಿವಾದ ಮಾಡಲು ಹೋದ ವಿದ್ಯಾರ್ಥಿಗಳನ್ನು ಪಾಲಕರ ಸಮ್ಮುಖದಲ್ಲಿ ಆಡಳಿತ ಮಂಡಳಿ ಮತ್ತು ಉಪನ್ಯಾಸಕರ ನಡುವೆ ಮಾತುಕತೆ ನಡೆದು ಮುನ್ನೆಚ್ಚರಿಕೆ ದೃಷ್ಟಿಯಿಂದ 18 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಲಾಗಿದೆ.
ಕಳೆದ ಕೆಲವು ಸಮಯದಿಂದ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ನಡುವೆ ಪ್ರೇಮ ಪ್ರಕರಣವೊಂದು ಬಯಲಿಗೆ ಬಂದಿತ್ತು. ಈ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಪಾಲಕರನ್ನು ಕರೆಯಿಸಿ ವಿಷಯ ತಿಳಿಸಿತ್ತು. ಈ ಬಳಿಕ ಕೆಲವು ಸಮಯ ಯಾವುದೇ ಗೊಂದಲವಿಲ್ಲದೆ ಕಾಲೇಜು ನಡೆಯುತ್ತಿತ್ತು. ಇದೀಗ ವಾರ್ಷಿಕೋತ್ಸವ ಸಮಯದಲ್ಲಿ ಮತ್ತೆ ಪ್ರೇಮ ಪ್ರಕರಣ ವಿಚಾರದ ಚರ್ಚೆಗಳು ಆರಂಭವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಉಪನ್ಯಾಸಕರ ತಂಡ ತರಗತಿಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವ ಬಗ್ಗೆ ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭ ಹಿಂದು ಯುವತಿಯ ಕೈಯಲ್ಲಿ ಪ್ರೇಮ ಪತ್ರ ಪತ್ತೆಯಾಗಿತ್ತು. ಈ ದಿನ ಮುಸ್ಲಿಂ ಯುವಕ ಕಾಲೇಜಿಗೆ ಬಂದಿರಲಿಲ್ಲ. ಯುವತಿಯ ಪಾಲಕರಲ್ಲಿ ಮಾತುಕತೆ ನಡೆಸಿ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಯುವತಿಯನ್ನು ಪರೀಕ್ಷೆಗೆ ಮಾತ್ರ ಆಗಮಿಸುವಂತೆ ಸೂಚನೆ ನೀಡಿದರು.
ಮುಸ್ಲಿಂ ಯುವಕ ತರಗತಿಗೆ ಹಾಜರಾಗುತ್ತಿದ್ದಂತೆ ಉಪನ್ಯಾಸಕರಿಗೆ ಮಾಹಿತಿ ನೀಡದೆ ಕೆಲವು ಹಿಂದೂ ಯುವಕರು ಗುಂಪು ಕಟ್ಟಿಕೊಂಡು ಹೋಗಿ ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಸ್ಲಿಂ ಯುವಕ ಹಾಗೂ ಆತನಿಗೆ ಸಹಕಾರ ಮಾಡಿದ 6 ಮಂದಿ ಮುಸ್ಲಿಂ ಯುವಕ-ಯುವತಿಯರನ್ನು ಹಾಗೂ ಗುಂಪು ಕಟ್ಟಿಕೊಂಡು ಪ್ರಶ್ನಿಸಲು ಹೋದ ಹಿಂದು ಯುವಕರನ್ನು ಪಾಲಕರ ಸಮ್ಮುಖದಲ್ಲಿ ವಿಚಾರಣೆ ನಡೆಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಸೂಚಿಸಿ ಮನೆಗೆ ಕಳುಹಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯ ದಿಟ್ಟ ನಿರ್ಧಾರಕ್ಕೆ ಪ್ರಶಂಸೆಗಳು ಕೇಳಿ ಬರುತ್ತಿದೆ.