ನ್ಯೂಸ್ ನಾಟೌಟ್: ಕಳೆದ ಕೆಲ ತಿಂಗಳ ಹಿಂದೆ ಇಡೀ ದೇಶವೇ ಬೆಚ್ಚಿ ಬೀಳಿಸುವಂತೆ ಮಾಡಿರುವ ಕೇರಳದಲ್ಲಿ ನಡೆದ ನರಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮೀರತ್ನ ಇಂಚೋರಿ ಪೊಲೀಸ್ ಠಾಣಾ ವ್ಯಾಪ್ತಿಯ ನಂಗ್ಲಿಶಾ ಗ್ರಾಮದ ಹೊಲವೊಂದರಲ್ಲಿ ರುಂಡ ಇಲ್ಲದ ಶವ ಪತ್ತೆಯಾಗಿದ್ದು, ಸಾವಿಗೆ ನರಬಲಿಯೇ ಕಾರಣವಾಗಿರಬಹುದು ಶಂಕಿಸಲಾಗಿದೆ.ನವೆಂಬರ್ 30 ರಂದು 3 ವರ್ಷದ ಬಾಲಕ ನಾಪತ್ತೆಯಾಗಿದ್ದಾನೆಂದು ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಇದೀಗ ಬಾಲಕನ ಮೃತದೇಹ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತಂತೆ ನಿರಂತರ ವಿಚಾರಣೆ ನಡೆಸಿದ ಪೊಲೀಸರು ಆರೋಪಿಯ ಬಾಯ್ಬಿಡಿಸಿದ್ದಾರೆ.ಈ ವೇಳೆ ಆತ ಮೀರತ್ನ ಕಬ್ಬಿನ ಗದ್ದೆಯಲ್ಲಿ ಮಗುವನ್ನು ಎಸೆದಿರುವುದನ್ನು ಒಪ್ಪಿಕೊಂಡಿದ್ದಾನೆ. ನಂತರ ಪೊಲೀಸರ ಒಂದು ತಂಡ ಮೀರತ್ ಗೆ ಹೋಗಿ ತಲೆ ಮತ್ತು ಕೈಕಾಲು ಇಲ್ಲದ ದೇಹವನ್ನು ಪತ್ತೆ ಮಾಡಿದ್ದಾರೆ. ಸಮೀಪದಲ್ಲಿ ತಲೆ ಕೂಡ ಪತ್ತೆಯಾಗಿದೆ. ಬಟ್ಟೆಗಳ ಆಧಾರವನ್ನು ಬೆನ್ನಟ್ಟಿದ್ದ ಪೊಲೀಸರು ಕಬ್ಬಿನ ಗದ್ದೆಯಲ್ಲಿರುವ ಶವವು ಪ್ರೀತ್ ವಿಹಾರ್ ಪ್ರದೇಶದಲ್ಲಿ ಕಾಣೆಯಾದ ಬಾಲಕನದ್ದು ಎಂದು ಗುರುತಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಗುವಿನ ಭೀಕರ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಮಗುವಿನ ಕುಟುಂಬ ಮತ್ತು ಸ್ಥಳೀಯರು ಪ್ರತಿಭಟನೆ ಕೂಡ ನಡೆಸಿದ್ದರು.