ನ್ಯೂಸ್ ನಾಟೌಟ್ : ವಿವಾಹಿತ ವಿದ್ಯಾರ್ಥಿನಿಯರಿಗೆ ಕೇರಳದ ವಿಶ್ವವಿದ್ಯಾನಿಲಯ ಸಿಹಿ ಸುದ್ದಿ ನೀಡಿದೆ. ಕೇರಳದಲ್ಲಿ ಇನ್ನು ಮುಂದೆ ವಿವಾಹಿತ ವಿದ್ಯಾರ್ಥಿನಿಯರಿಗೆ 60 ದಿನಗಳ ಕಾಲ ಹೆರಿಗೆ ರಜೆ ನೀಡಲು ನಿರ್ಧರಿಸಲಾಗಿದೆ. ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯದ 19 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರು ಈ ಮಾತೃತ್ವ ರಜೆಯನ್ನು ಪಡೆಯಬಹುದಾಗಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ಇತ್ತೀಚಿನ ದಿನಗಳಲ್ಲಿ ಕಾಲೇಜು ಶಿಕ್ಷಣವನ್ನು ಪಡೆಯುವುದಕ್ಕೆ ಬಂದಿರುವ ಹಲವು ವಿದ್ಯಾರ್ಥಿನಿಯರು ಮದುವೆ ಬಳಿಕ ಮಗು ಹೊಂದುವ ಕಾರಣದಿಂದ ರಜೆ ಹಾಕುತ್ತಿದ್ದಾರೆ. ಇದರಿಂದ ಆ ವಿದ್ಯಾರ್ಥಿನಿ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿರುವುದನ್ನು ಮನಗಂಡು ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ ಹೊಸ ಯೋಜನೆ ರೂಪಿಸಿದೆ. ಸಹ ಕುಲಪತಿ ಸಿ.ಟಿ. ಅರವಿಂದ ಕುಮಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೆರಿಗೆಯ ಮೊದಲು ಅಥಾವ ನಂತರ 2 ಆಯ್ಕೆ ಪ್ರಕ್ರಿಯೆಯಲ್ಲಿ ರಜೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ. ಮೊದಲು ಅಥವಾ ಎರಡನೇ ಹೆರಿಗೆಗೆ ಮಾತ್ರ ರಜೆ ನೀಡುವ ಬಗ್ಗೆಯೂ ತಿರ್ಮಾನಿಸಿದೆ. ಒಂದು ವೇಳೆ ಗರ್ಭಪಾತವಾದರೆ ಟ್ಯುಬೆಕ್ಟಮಿ ಮಾಡಿಸಿಕೊಂಡರೆ ಕೂಡ 14 ದಿನ ರಜೆ ನೀಡಲು ಅವಕಾಶ ನೀಡುತ್ತದೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಇಂತಹ ಕ್ರಮ ದೇಶದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ.