ವರದಿ: ಕೃತಿ ಗಣೇಶ್
ನ್ಯೂಸ್ ನಾಟೌಟ್ : ತುಪ್ಪದಿಂದ ಮಾಡಿದ ತಿಂಡಿಗಳು ಬಲು ರುಚಿ. ಅದರಲ್ಲೂ ಸಿಹಿ ತಂಡಗಳು ಅಬ್ಬಬ್ಬಾ..! ಬಾಯಲ್ಲಿ ನೀರೂರುತ್ತೆ. ಬಾಯಿಗೆ ಅಷ್ಟು ರುಚಿಯನ್ನು ನೀಡುವ ತುಪ್ಪದ ಸ್ವಾದ ಚರ್ಮದ ಮೈಕಾಂತಿಯನ್ನೂ ಹೆಚ್ಚಿಸುತ್ತದೆ ಗೊತ್ತಾ ನಿಮಗೆ? ಕೇವಲ ಕಾಂತಿಯಷ್ಟೇ ಅಲ್ಲ ಇದರಲ್ಲಿ ಔಷಧಿಯ ಗುಣವೂ ಹೇರಳವಾಗಿದೆ. ಹಾಗಾದರೆ ಬನ್ನಿ ತುಪ್ಪದಿಂದ ಮನುಷ್ಯನಿಗೆ ಏನೆಲ್ಲ ಉಪಯೋಗ ಇದೆ ಅನ್ನೋದನ್ನು ನೋಡೋಣ ಬನ್ನಿ..
ತುಪ್ಪ ನೈಸರ್ಗಿಕ ಔಷಧ ಅಂದ್ರೂ ತಪ್ಪಾಗಲಾರದು. ಇದನ್ನು ಬಿರು ಬೇಸಿಗೆಯಲ್ಲೂ ಬಳಸಬಹುದು. ಕೆಲವೊಮ್ಮೆ ಸೂರ್ಯನ ಕಿರಣಗಳಿಂದ ಚರ್ಮದ ಮೇಲೆ ಗಾಯಗಳು ಅಥವಾ ಕಪ್ಪು ಕಲೆಗಳು ಉಂಟಾಗುತ್ತವೆ. ನೀವು ಮಲಗುವ ಮೊದಲು ಪ್ರತಿದಿನ ರಾತ್ರಿ ಸುಟ್ಟ ಸ್ಥಳದಲ್ಲಿ ತುಪ್ಪವನ್ನು ಲೇಪಿಸಿದರೆ, ಆ ಕಲೆ ಕೂಡ ಮಾಯವಾಗುತ್ತದೆ. ಇದಲ್ಲದೇ ತುಪ್ಪವನ್ನು ಮುಖಕ್ಕೂ ಹಚ್ಚಿಕೊಂಡು ಮಲಗುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.
ಆಯುರ್ವೇದ ಔಷಧೀಯ ಗುಣಗಳು ತುಪ್ಪದಲ್ಲಿದ್ದು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದನ್ನು ಮುಖಕ್ಕೆ ಹಚ್ಚುವ ಮೊದಲು ನೀರಿನಿಂದ ಮುಖವನ್ನು ತೊಳೆದು ಸ್ವಚ್ಛವಾದ ಬಟ್ಟೆಯ ಸಹಾಯದಿಂದ ಒರೆಸಿಕೊಳ್ಳಿ. ತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಊತವಿರುವ ಜಾಗಕ್ಕೆ ಅನ್ವಯಿಸಿ. ದೇಹದ ಯಾವುದೇ ಭಾಗದಲ್ಲಿ ಊತವಿದ್ದರೂ ಇದನ್ನು ಹಚ್ಚಿಕೊಳ್ಳಬಹುದು ಶೀಘ್ರ ಉಪಶಮನ ನೀಡುತ್ತದೆ.
ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಾಮಾನ್ಯ. ಕೆಲವೊಮ್ಮೆ ಗಾಯವಾಗಿ ರಕ್ತ ಬರಲು ಪ್ರಾರಂಭಿಸುತ್ತದೆ. ಈ ಸಂದರ್ಭದಲ್ಲಿ ನೀವು ತುಟಿಗಳಿಗೆ ತುಪ್ಪವನ್ನು ಹಚ್ಚಿಕೊಳ್ಳಬೇಕು. ತುಟಿಗಳ ಒಡಕನ್ನು ಇದು ಕಡಿಮೆ ಮಾಡುತ್ತದೆ. ನಿಮಗೆ ಯಾವುದೇ ರೀತಿಯ ಚರ್ಮದ ಸೋಂಕು (ತುರಿಕೆ, ಕೆಂಪು, ಶುಷ್ಕತ) ಇದ್ದರೆ ತುಪ್ಪ ಅದನ್ನು ನಿವಾರಿಸುತ್ತದೆ. ತುಪ್ಪ ಚಳಿಗಾಲದಲ್ಲಿ ಚರ್ಮದ ತೇವಾಂಶವನ್ನು ಉಳಿಸಿಕೊಳ್ಳುತ್ತದೆ. ನೀವು ಇದನ್ನು ಪ್ರತಿದಿನ ಮಲಗುವಾಗ ಚರ್ಮಕ್ಕೆ ಹಚ್ಚಿಕೊಂಡರೆ ಶುಷ್ಕ ಮತ್ತು ನಿರ್ಜೀವ ತ್ವಚೆಯಿಂದ ಮುಕ್ತಿ ದೊರೆಯುತ್ತದೆ.