ನ್ಯೂಸ್ ನಾಟೌಟ್: ಗುಂಡ್ಯ ಹೊಳೆಗೆ ಮೀನು ಹಿಡಿಯಲೆಂದು ಹೋದವರ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿದೆ. ಒಬ್ಬನನ್ನು ತುಳಿದು ಕೊಂದರೆ ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದೆ. ಈಘಟನೆ ಶನಿವಾರ ಸಾಯಂಕಾಲ ಶಿರಾಡಿ ಎಂಬಲ್ಲಿ ಸಂಭವಿಸಿದೆ.
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ( 45) ಮತ್ತು ಅವರ ಪುತ್ರ ಶರಣ್ (18) ಮೀನು ಹಿಡಿಯುಲು ಗುಂಡ್ಯ ಹೊಳೆ ಬದಿಗೆ ತೆರಳಿದ್ದರು. ಈ ವೇಳೆ ಕಾಡಿನಿಂದ ಹೊಳೆಯತ್ತ ಆಗಮಿಸಿದ್ದ ಒಂಟಿ ಸಲಗವೊಂದು ಶರಣ್ ಮೇಲೆ ದಾಳಿ ಮಾಡಿದೆ. ಆಗ ರಕ್ಷಣೆಗೆ ಮುಂದಾದ ತಿಮ್ಮಪ್ಪ ಅವರನ್ನೂ ಕೆಡವಿ ಕಾಲಿನಿಂದ ಹೊಸಕಿ ಗಂಭೀರವಾಗಿ ಗಾಯಗೊಳಿಸಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಶರಣ್ ಅಪಾಯದಿಂದ ಪಾರಾಗಿದ್ದಾರೆ. ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಮತ್ತವರ ತಂಡ ಭೇಟಿ ನೀಡಿದ್ದು, ಗಾಯಾಳುಗಳ ಚಿಕಿತ್ಸೆಗೆ ಸಂಬಂಧಿಸಿ ಇಲಾಖಾ ಕ್ರಮ ಕೈಗೊಂಡಿದ್ದಾರೆ.