ನ್ಯೂಸ್ ನಾಟೌಟ್ : ಕಾಂತಾರ ಸಿನಿಮಾ ಇಡೀ ವಿಶ್ವದಾದ್ಯಂತ ಸದ್ದು ಮಾಡಿದ ಕನ್ನಡದ ಸಿನಿಮಾ.ಕರಾವಳಿಯ ದೈರಾಧಾನೆಯ ಕಥಾಹಂದರದ ಈ ಚಿತ್ರ ಇಡೀ ಪ್ರಪಂಚದಾದ್ಯಂತ ಭಾರಿ ಸಂಚಲನವನ್ನೇ ಸೃಷ್ಟಿ ಮಾಡಿತ್ತು.ಈಗಲೂ ಅದರ ಹವಾ ಹಾಗೆಯೇ ಇದೆ.
ನಂಬಿಕೆಗೆ ಅಪಮಾನ:
ಇತ್ತೀಚಿಗೆ ಕಾಂತಾರ ಸಿನಿಮಾದಲ್ಲಿ ತೋರಿಸಲಾದ ದೈವದ ಕುರಿತು ಅವಹೇಳನಕಾರಿ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ. ರಿಷಬ್ ಶೆಟ್ಟಿ ನಟನೆಯನ್ನು ಅನುಕರಣೆ ಮಾಡಿ ದೈವವನ್ನು ಅವಹೇಳನ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಟೀಕೆಗಳು ಕೇಳಿ ಬಂದಿದ್ದವು. ನಂಬಿಕೆಯ ಪ್ರತೀಕವಾದ ತುಳುನಾಡಿನ ದೈವಾರಾಧನೆಯನ್ನು ಅವಹೇಳನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚುವುದು ಎಷ್ಟು ಸರಿ ಎಂದು ನೆಟ್ಟಿಗರು ಕೆಂಡಮಂಡಲರಾಗಿದ್ದರು. ರೀಲ್ಸ್ ಮಾಡುವವರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸಾಂತಾಕ್ಲಾಸ್ ವೇಷಧಾರಿ ಒಬ್ಬ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ಅನುಕರಣೆ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಕ್ರಿಸ್ ಮಸ್ ಸಂತನ ವೇಷ ತೊಟ್ಟು ಕಾಂತಾರ ಸಿನಿಮಾ ಹಾಡಿಗೆ ಪಂಜುರ್ಲಿ ದೈವವವನ್ನು ಅಣಕಿಸುವ ವಿಡಿಯೋಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂಗಳ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮನವಿ ಮಾಡಿದ್ದರು ಶೆಟ್ರು
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಾಂತಾರ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. 16 ಕೋಟಿ ರೂ. ಬಜೆಟ್ನಲ್ಲಿ ತಯಾರಾದ ಸಿನಿಮಾ ಇದುವರೆಗೂ ಸುಮಾರು 500 ಕೋಟಿ ರೂ. ಲಾಭ ಗಳಿಸಿದೆ. ಅಲ್ಲದೆ, ಭಾರತೀಯ ಚಿತ್ರರಂಗದಲ್ಲಿ ಕೆಲವೊಂದಿಷ್ಟು ಅಪರೂಪದ ದಾಖಲೆಗಳ ಸೃಷ್ಟಿಗೆ ಈ ಸಿನಿಮಾ ಕಾರಣವಾಗಿದೆ. ಇನ್ನು ಸಿನಿಮಾದಲ್ಲಿ ತೋರಿಸಲಾಗಿರುವ ಪಂಜುರ್ಲಿ, ಗುಳಿಗ ದೈವಾರಾಧನೆಯ ದೃಶ್ಯಗಳನ್ನು ಅನುಕರಣೆ ಮಾಡಬೇಡಿ ಅಂತ ಚಿತ್ರತಂಡ ಹಾಗೂ ರಿಷಬ್ ಶೆಟ್ಟಿ ಕೇಳಿಕೊಂಡರೂ ಸಹ ಕೆಲ ಜನರು ಕಿವಿಗೆ ಹಾಕಿಕೊಳ್ಳುತ್ತಿಲ್ಲವೆಂದರೆ ಬೇಸರದ ಸಂಗತಿ.