ನ್ಯೂಸ್ ನಾಟೌಟ್: ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಕ್ಕೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ನಿರ್ಧರಿಸಿದೆ. ಮೆದುಳು ಜ್ವರ ಅನ್ನುವುದು ಮಕ್ಕಳ ಭವಿಷ್ಯವನ್ನೇ ನುಂಗಿ ಹಾಕಬಹುದು. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮಕ್ಕಳಿಗೆ ಮೆದುಳು ಜ್ವರ ಬಾರದಂತೆ ತಡೆಯುವ ನಿಟ್ಟಿನಲ್ಲಿ ವಿಶೇಷ ಮುನ್ನೆಚ್ಚರಿಕೆ ಲಸಿಕೆ ಅಭಿಯಾನ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ.
ಯಾವಾಗದಿಂದ ಲಸಿಕೆ?
ಡಿ. 5ರಿಂದ 25ರ ವರೆಗೆ ಲಸಿಕೆ ಅಭಿಯಾನ ನಡೆಯಲಿದೆ. 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 2,17,707 ಮಕ್ಕಳಿಗೆ ಹಾಗೂ ಮಂಗಳೂರು ಪಾಲಿಕೆ ಮತ್ತು ಗ್ರಾಮಾಂತರ ಭಾಗದ 2.20 ಲಕ್ಷ ಸೇರಿದಂತೆ ಜಿಲ್ಲೆಯ ಸುಮಾರು ಲಕ್ಷ ಮಕ್ಕಳು ಲಸಿಕೆಯನ್ನು ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.
ಮೆದುಳು ಜ್ವರ ಹೇಗೆ ಬರುತ್ತದೆ?
ಜಪಾನೀಸ್ ಎನ್ಸೆಫೆಲೈಟಿಸ್ ವೈರಸ್ (ಜೆಇವಿ)ನಿಂದ ಮೆದುಳು ಜ್ವರ ಬಾಧಿಸುತ್ತದೆ. ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಈ ವೈರಸ್ ಹರಡುತ್ತದೆ. ಇದಕ್ಕೆ ಲಸಿಕೆ ಚುಚ್ಚುಮದ್ದು ಪರಿಣಾಮಕಾರಿ ಅಸ್ತ್ರವಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವವರು ಜ್ವರ ಪೀಡಿತರಾಗಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ, ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯರು.