ನ್ಯೂಸ್ ನಾಟೌಟ್: ತುಂಬಾ ಸೆಕೆ ಆಗುತ್ತಿದೆ. ಸ್ವಲ್ಪ ಸ್ನಾನ ಮಾಡಿ ಆಯಾಸ ಆರಿಸಿಕೊಳ್ಳುವ ಎಂದು ನದಿಗೆ ಇಳಿದ ಯುವಕರನ್ನು ಕಾಡಾನೆಗಳ ಹಿಂಡು ಬೆನ್ನಟ್ಟಿದ ಘಟನೆ ಕೊಡಗು ಜಿಲ್ಲೆಯ ಕೊಯನಾಡಿನ ಸಮೀಪ ಸೋಮವಾರ ನಡೆದಿದೆ. ಕಾಡಾನೆಗಳ ದಾಳಿಯಿಂದ ಸ್ವಲ್ಪದರಲ್ಲೇ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಡಗಿನ ಘಾಟ್ ಸೆಕ್ಷನ್ ಆರಂಭವಾಗುವುದು ಕೊಯನಾಡಿನ ನಂತರ. ಈ ಕೊಯನಾಡು ಸಂಪಾಜೆಗೆ ಅಣತಿ ದೊರದಲ್ಲಿದೆ. ಪ್ರಕೃತಿ ರಮಣೀಯ ದೃಶ್ಯದ ಜತೆಗೆ ಪಯಸ್ವಿನಿ ನದಿ ನೀರು ವಾಹನ ಸವಾರರನ್ನು ಆಕರ್ಷಿಸುತ್ತದೆ. ಕೆಲವು ಸಲ ಪಯಸ್ವಿನಿ ಅಂದಕ್ಕೆ ಮನಸೋತು ಕೆಲವರು ಈಜುವುದಕ್ಕೆ ಇಳಿಯುವುದೂ ಇದೆ. ಹೀಗೆ ಇಳಿದ ಯುವಕರ ತಂಡಕ್ಕೆ ಕಾಡಾನೆಗಳ ಪಡೆ ಚಳಿ ಬಿಡಿಸಿದೆ. ಯುವಕರ ತಂಡ ಪಯಸ್ವಿನಿ ಸಮೀಪ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ಪ್ರವಾಸಿಗರೊಬ್ಬರು ನದಿಯ ತಟದಲ್ಲಿ ಅಲ್ಲಲ್ಲಿ ಬಿದ್ದಿದ್ದ ಕಸದ ಚಿತ್ರೀಕರಣವನ್ನು ತೆಗೆದುಕೊಳ್ಳುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ನದಿ ನೀರು ಕುಡಿಯುವುದಕ್ಕಾಗಿ ಏಕಾಏಕಿ ಕಾಡಾನೆಗಳ ಗುಂಪು ನುಗ್ಗಿದೆ. ಭಯಭೀತರಾದ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರು ತಮ್ಮ ಬಟ್ಟೆಗಳನ್ನು ಬಿಟ್ಟು ಓಡಿದ್ದಾರೆ ಎನ್ನಲಾಗುತ್ತಿದೆ. ಈ ವಿಡಿಯೋವನ್ನು ಉನೈಸ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.