ನ್ಯೂಸ್ ನಾಟೌಟ್ : ಚಲನ ಚಿತ್ರ ಮೂಲಕ ಕೊಡಗಿನ ಶ್ರೀಮಂತ ಪರಿಸರ,ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸಿದ ಸಿನಿಮಾ ‘ಪೊಮ್ಮಾಲೆ ಕೊಡಗ್ ‘ ೨೮ ನೇ ಕೊಲ್ಕತ್ತಾ ಅಂತರಾಷ್ಟ್ರೀಯ ಸಿನಿಮೋತ್ಸವದ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ಕೊಡವ ಸಿನಿಮಾ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಜನರ ಮೆಚ್ಚುಗೆಗೆ ಪಾತ್ರ
ಪಿಐಎಪಿಎಫ್ ಮಾನ್ಯತೆ ಪಡೆದ ಭಾರತದ ೫ ಸಿನಿಮೋತ್ಸವಗಳಲ್ಲಿ ಒಂದಾಗಿರುವ ಈ ಚಿತ್ರೋತ್ಸವದಲ್ಲಿ ೮ ದೇಶಗಳ ಸಿನಿಮಾ ಪ್ರದರ್ಶನ ನಡೆಯಲಿದೆ.೯೦೦ ಕ್ಕೂ ಅಧಿಕ ಚಿತ್ರಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಸಾಕ್ಷ್ಯಚಿತ್ರ, ಕಿರುಚಿತ್ರ, ಸೇರಿದಂತೆ ಒಟ್ಟು ೧೮೩ ಚಿತ್ರಗಳು ಮಾತ್ರ ಆಯ್ಕೆಯಾಗಿದೆ. ಅದರಲ್ಲಿ ಕರ್ನಾಟಕದಿಂದ ತುಳು ,ಕೊಡವ, ಬ್ಯಾರಿ, ಸೇರಿ ಸಿನಿಮಾಗಳು ಆಯ್ಕೆಯಾಗಿದೆ. ಹಾಗೂ ಕೊಡಗಿನಿಂದ ಸಿನಿಮಾ ಆಯ್ಕೆಯಾಗಿದ್ದು ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಏಳು ಬೀಳುಗಳನ್ನು ಕಂಡ ನಿರ್ದೇಶಕ:
ಈ ಚಿತ್ರದ ಶೂಟಿಂಗ್ ಶುರು ಮಾಡುವ ಹಂತದಲ್ಲಿಯೇ ಚಿತ್ರ ತಂಡ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ.ಖ್ಯಾತ ಚಲನಚಿತ್ರ ನಿರ್ದೇಶಕ ಎ.ಟಿ.ರಘು ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದ ನಂತರ ಕೊಡವ ಚಿತ್ರರಂಗ ಸೊರಗಿದಂತೆ ಕಂಡು ಬಂತು. ಆದರೆ ಕೊಡವ ಚಲನಚಿತ್ರಗಳ ನಿರ್ಮಾಣಕ್ಕೆ ಮತ್ತೆ ವೇದಿಕೆ ಕಲ್ಪಿಸುವ ಮೂಲಕ ಸ್ಫೂರ್ತಿಯನ್ನು ತುಂಬುವ ಕಾರ್ಯವನ್ನು ಮಾಡಿ ಯಶಸ್ಸನ್ನು ಸಾಧಿಸಿದವರು ನಿರ್ಮಾಪಕ, ನಿರ್ದೇಶಕ, ಕಥೆಗಾರ,ಸಂಭಾಷಣೆ ರಚನೆಕಾರ, ನಟ ಕೊಡಗಿನ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು.
ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಇವರು ನಿವೃತ್ತಿ ನಂತರ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಗಮನ ಸೆಳೆದಿದ್ದಾರೆ.ಕನ್ನಡ ಮತ್ತು ಕೊಡವ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುವುದರೊಂದಿಗೆ ನಿರ್ದೇಶನ, ನಿರ್ಮಾಣ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡ ಹೆಗ್ಗಳಿಕೆ ಇವರದು. ಕೊಡವ ಧಾರಾವಾಹಿಗಳಲ್ಲಿ ನಟಿಸುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.