ನ್ಯೂಸ್ ನಾಟೌಟ್ :ಹಲವು ವೈವಿಧ್ಯ ಪ್ರಾಣಿ-ಪಕ್ಷಿಗಳಿಂದಾಗಿ ಇಂದು ಮಂಗಳೂರಿನ ಪಿಲಿಕುಳ ಮೃಗಾಲಯ ರಾಜ್ಯದಲ್ಲಿಯೇ ಪ್ರಮುಖವಾಗಿದೆ.ಪ್ರಾಣಿ-ಪಕ್ಷಿ ಪ್ರಿಯರ ಚಿತ್ತಾಕರ್ಷಿಸುವ ಪಿಲಿಕುಳಕ್ಕೆ ಇದೀಗ ಹೊಸ ಅತಿಥಿಗಳ ಆಗಮನವಾಗಿದೆ. ಪಿಲಿಕುಳದಲ್ಲಿ ಈಗಾಗಲೇ ಪ್ರಾಣಿ ಮತ್ತು ವೈವಿಧ್ಯ ಪ್ರಬೇಧಗಳ ಪಕ್ಷಿಗಳು ಇವೆ. ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪಿಲಿಕುಳ ದೇಶದಲ್ಲಿಯೇ ಮೊದಲ ಕಿಂಗ್ ಕೋಬ್ರಾ ತಳಿಯ ಕೇಂದ್ರವಾಗಿದೆ. ವರ್ಷಕ್ಕೊಮ್ಮೆ ಶಾಲಾ ಮಕ್ಕಳಿಗೆ ವನ್ಯಮೃಗಗಳ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.ದಿನ ನಿತ್ಯ ಇಲ್ಲಿಗೆ ನೂರಾರು ಜನ ಹಲವು ವೈವಿಧ್ಯ ಪ್ರಾಣಿ-ಪಕ್ಷಿಗಳನ್ನು ನೋಡುವುದಕ್ಕೆ ಬರುತ್ತಿರುತ್ತಾರೆ.ಇದೀಗ ಹೊಸ ಪ್ರಾಣಿಗಳ ಆಗಮನ ಪ್ರಾಣಿ-ಪಕ್ಷಿ ಪ್ರಿಯರಿಗೆ ಅತೀವ ಸಂತೋಷವನ್ನುಂಟು ಮಾಡಿದೆ.
ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೆರೆಗೆ ಗುಜರಾತ್ನ ಗ್ರೀನ್ ಜೂ ದಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಪ್ರಾಣಿಗಳನ್ನು ತರಲಾಗಿದೆ.ಮದ್ಯ ಮತ್ತು ದಕ್ಷಿಣ ಅಮೆರಿಕ, ಬ್ರೆಜಿಲ್, ಅರ್ಜೆಂಟೀನ, ಆಫ್ರಿಕಾ ಖಂಡ ಮತ್ತು ಆಸ್ಟ್ರೇಲಿಯಗಳಲ್ಲಿ ಕಾಣಸಿಗುವ ಸಣ್ಣ ಜಾತಿಯ ಅಳಿಲು ಕಪಿ, ಮರ್ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ವಿದೇಶಿ ಪಕ್ಷಿಗಳನ್ನು ತರಿಸಲಾಗಿದೆ.
ಪಿಲಿಕುಳದಲ್ಲಿ ಹೆಚ್ಚುವರಿಯಾಗಿರುವ ಹುಲಿಗಳು, ಚಿರತೆಗಳು, ಕಾಡು ನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಕೊಡಲಾಗಿದೆ.ಹೊಸದಾಗಿ ಬಂದ ಪ್ರಾಣಿಗಳ ಆರೋಗ್ಯ ಪರಿಶೀಲಿಸಲು ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ನಿಗಾದಲ್ಲಿ ಇಡಲಾಗಿದೆ. ಪಕ್ಷಿಗಳು ವೀಕ್ಷಣೆಗೆ ಮುಕ್ತ ವಾಗಿವೆ. ಇತರ ಪ್ರಾಣಿಗಳು ನಿಗಾ ಅವಧಿ ಮುಗಿದ ಕೂಡಲೇ ಜನರ ವೀಕ್ಷಣೆಗೆ ಇಡಲಾಗುವುದು ಎಂದು ತಿಳಿಸಲಾಗಿದೆ.