ವರದಿ:ನಿಶಾ ಬೆಳ್ತಂಗಡಿ
ನ್ಯೂಸ್ ನಾಟೌಟ್:ಇದೇ ಮೊದಲಬಾರಿಗೆ ನಡೆಯುತ್ತಿರುವ ಸ್ಕೌಟ್ಸ್–ಗೈಡ್ಸ್ನ ‘ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ–2022’ಕ್ಕೆ ಚಾಲನೆ ನೀಡಲಾಯಿತು. ಡಿ. 27ರವರೆಗೆ ಜಾಂಬೂರಿ ನಡೆಯಲಿದ್ದು, ಸಾಗರೋಪಾದಿಯಲ್ಲಿ ಜನ ಬಂದು ಈ ವೈಭವವನ್ನು ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. 25 ಎಕರೆಗೂ ವಿಸ್ತಾರದ ಪ್ರದೇಶದಲ್ಲಿ ಆಯೋಜಿಸಿದ್ದ ವಿವಿಧ ಪ್ರದರ್ಶನಗಳು, ಐದು ವೇದಿಕೆಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದೆ.
ಜಾಂಬೂರಿಗೆ ಭವ್ಯ ವೇದಿಕೆಯ ಮೇಲೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್, ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ‘ಭಾರತದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ. ಅನೇಕ ಯೋಜನೆಗಳನ್ನು ರೂಪಿಸುತ್ತಿದೆ. ಮುಂದಿನ 25 ವರ್ಷಗಳ ಕಾಲ ನಾವು ಹೊಸ ಹಾದಿಯಲ್ಲಿ ನಡೆಲಿದ್ದೇವೆ. ಶಿಕ್ಷಣ ಹಾಗು ಕ್ರೀಡೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತೊಡಗುವುದರಿಂದ ಶಿಸ್ತು ಪ್ರಾಪ್ತಿಯಾಗುತ್ತದೆ . ಭಾರತೀಯ ಕ್ರೀಡೆಯಾದ ಕಬಡ್ಡಿಗೆ ಮುಂಬರುವ ದಿನದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗುವುದು ಎಂದರು.
ಭಾರತದ ಮೊದಲ ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕರ್ನಾಟಕದ ಮೂಡುಬಿದಿರೆಯ ಆಳ್ವಾಸ್ನಲ್ಲಿ ನಡೆಯುತ್ತಿರುವುದು ಸಂತೋಷದ ವಿಷಯ. ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸ್ಕೌಟ್ಸ್ ಗೈಡ್ಸ್ ಸೇವೆ ಅಪಾರ. ಭಾರತ ಯುವ ಜನತೆಯ ದೇಶ, ನಾವೆಲ್ಲರೂ ಕೂಡ ವಿಶ್ವ ಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರಮಿಸಬೇಕಿದೆ. ದೇಶದ ಅಭಿವೃದ್ದಿಯಲ್ಲಿ ಯುವಕರ ಪಾತ್ರ ದೊಡ್ಡದು. ¨ ದೇಶದ ಹಿತರಕ್ಷಣೆ ಮತ್ತು ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂದು ಆಲೋಚಿಸಿ ಮುಂದಡಿಯಿಟ್ಟರೆ ಮುಂದಿನ ೨೫ ವರ್ಷಗಳ ಅವಧಿಯಲ್ಲಿ ಭಾರತವನ್ನು ಮತ್ತಷ್ಟು ಪ್ರಭಾವೀ ರಾಷ್ಟ್ರವನ್ನಾಗಿ ರೂಪಿಸಬಹುದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯರಾದ ಡಾ .ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಂದಿಗ್ಧ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಸ್ಥೈರ್ಯದ ಮನೋಧರ್ಮವನ್ನು ರೂಪಿಸಿಕೊಳ್ಳುವುದರ ಕಡೆಗೆ ಯುವಕರು ಹೆಚ್ಚು ಆದ್ಯತೆ ನೀಡಬೇಕು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ಧೃತಿಗೆಡಬಾರದು. ಸವಾಲಿನ ಸಂದರ್ಭಗಳನ್ನು ಎದುರಿಸುವ ನಿಶ್ಚಿತ ಪ್ರಜ್ಞೆಯಿದ್ದರೆ ಬಿಕಟ್ಟುಗಳುಂಟಾದಾಗ ವಿಚಲಿತರಾಗುವ ಪ್ರಮೇಯ ಬರುವುದಿಲ್ಲ. ಯುವ ಸಮುದಾಯದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ನಾವು ಕೀಳರಿಮೆಯಿಂದ ಸಂಪೂರ್ಣವಾಗಿ ಹೊರಬರಲಿದ್ದೇವೆ ಎಂಬ ವಿಶ್ವಾಸವಿದೆ’ ಎಂದರು.
ಸ್ಕೌಟ್ಸ್–ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಾಷ್ಟ್ರೀಯ ಆಯುಕ್ತ ಕೃಷ್ಣಕುಮಾರ್ ಕಾಂಡೇಲ್ವಾಲ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಕೋಟ್ಯಾನ್, ಹೆಚ್ಚುವರಿ ಮುಖ್ಯ ಆಯುಕ್ತ ಖಾಲೀದ್ ಹಾಗೂ ಇತರರು ಇದ್ದರು.ಸ್ಕೌಟ್ಸ್ ಆ್ಯಂಡ್ ಗೈಡ್ಸ್ನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮುಖ್ಯ ಆಯುಕ್ತ ಮೋಹನ್ ಆಳ್ವ ವಂದಿಸಿದರು.