ವರದಿ:ನಿಶಾ ಬೆಳ್ತಂಗಡಿ
ನ್ಯೂಸ್ ನಾಟೌಟ್ :ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಮುಂದಿಟ್ಟುಕೊಂಡು ತಯಾರಾಗುತ್ತಿರುವ ಚಲನಚಿತ್ರ ತುಳುವಿನ ಬಿದ್೯ದ ಕಂಬುಲದ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಹೇಳಿದರು.ಅವರು ಮಂಗಳೂರಿನ ಉರ್ವ ಮೈದಾನದಲ್ಲಿ ಬಿದ್೯ದ ಕಂಬುಲ ಚಿತ್ರೀಕರಣದ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ತುಳು ಸಂಸ್ಕೃತಿ ಕಟ್ಟಿಕೊಡಲಿದೆ:
ಈ ಸಿನಿಮಾದಲ್ಲಿ ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೇ ಪ್ರೇಕ್ಷಣೀಯ ಸ್ಥಳಗಳನ್ನು ಶ್ರೀಮಂತವಾಗಿ ತೋರಿಸಲಾಗಿದೆ. ಇದು ಪ್ರವಾಸೋದ್ಯಮಕ್ಕು ಕೊಡುಗೆ ನೀಡಲಿದೆ. ಕನ್ನಡ,ತುಳು ಭಾಷೆ ಅಲ್ಲದೇ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗಲಿದ್ದು, ಇಂಗ್ಲೀಷ್ ಭಾಷೆಗೂ ಡಬ್ ಮಾಡುವ ಚಿಂತನೆ ಇದೆ ಎಂದರು.ಸಿನಿಮಾದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಬಹಳಷ್ಟು ಇದೆ. ಈಗಾಗಲೇ 70 ದಿನಗಳ ಕಾಲ ಶೂಟಿಂಗ್ ನಡೆದಿದ್ದು ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತಿಳಿಸಿದರು.ತುಳುನಾಡಿನ ಹಲವಾರು ಪ್ರಸಿದ್ಧ ರಂಗ ಕಲಾವಿದರ ಜತೆಯಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಮತ್ತು ರವಿಶಂಕರ್ ನಟಿಸಲಿದ್ದಾರೆ. ಕಾಂತಾರ ಸಿನಿಮಾದಲ್ಲಿ ಅಭಿನಯಿಸಿರುವ ಸ್ವರಾಜ್ ಶೆಟ್ಟಿ, ಕಂಬಳದ ಮಿಂಚಿನ ಓಟಗಾರ “ಕ್ರೀಡಾರತ್ನ” ಪುರಸ್ಕೃತ ಶ್ರೀನಿವಾಸ ಗೌಡ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಕುಸಲ್ದರಸೆ ನವೀನ್ ಡಿ” ಪಡೀಲ್ ಕೂಡಾ ಬಣ್ಣ ಹಚ್ಚಿದ್ದಾರೆ. ಈ ಎಲ್ಲಾ ದೃಶ್ಯಗಳು ನೈಜತೆಯಿಂದ ಕೂಡಿದ್ದು ಸಹಜತೆಯಿಂದಲೇ ಚಿತ್ರವನ್ನು ನಿರ್ಮಿಸಲಾಗಿದೆ ಎಂದರು.
ಚಿತ್ರವನ್ನು ಪ್ರೋತ್ಸಾಹಿಸಿ :
ಚಿತ್ರದ ಸಂಭಾಷಣೆಕಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಈ ಚಿತ್ರದ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ತುಳು ಭಾಷೆಯ ಚಿತ್ರಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಡಲಿದ್ದಾರೆ. ತುಂಬಾ ಭಿನ್ನ ಸಿನಿಮಾ ಇದಾಗಿದ್ದು ಎಲ್ಲರೂ ಪ್ರೋತ್ಸಾಹಿಸಿ” ಎಂದು ಹೇಳಿದರು.
ವಿಶ್ವದೆಲ್ಲೆಡೆ ಪಸರಿಸಲಿದೆ:
ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನನ್ನ ಪಾತ್ರ ಕೂಡ ಡಿಫರೆಂಟ್ ಆಗಿದೆ. ನಮ್ಮ ತುಳುನಾಡಿನ ಜಾನಪದ ಸೊಗಡನ್ನು ಬಿಂಬಿಸುವಂತಹ ಚಿತ್ರ ಇದಾಗಿದ್ದು ವಿಶ್ವದೆಲ್ಲೆಡೆ ಪಸರಿಸಲಿದೆ. ಕಂಬಳ ಬರಿ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ನಮ್ಮ ಬದುಕು” ಕುಸಲ್ದರಸೆ ನವೀನ್ ಡಿ. ಪಡೀಲ್ ಅಭಿಪ್ರಾಯ ಪಟ್ಟರು.
ಪ್ರೀತಿಯಿಂದ ಆಶೀರ್ವದಿಸಿ:
ಸ್ವರಾಜ್ ಶೆಟ್ಟಿ ಮಾತನಾಡಿ, “ಕಂಬಳ , ತುಳುನಾಡಿನ ಸಂಸ್ಕೃತಿ ಕುರಿತ ಸಿನಿಮಾವಾಗಿದೆ. ನನ್ನ ಪಾತ್ರ ಸಾಕಷ್ಟು ವಿಭಿನ್ನವಾಗಿದೆ. ಇಷ್ಟಪಟ್ಟು ನಟಿಸಿದ್ದೇನೆ, ತುಳುವರು ಪ್ರೀತಿಯಿಂದ ಬರಮಾಡಿಕೊಳ್ಳಿ” ಎಂದರು.ಕಂಬಳ ಓಟಗಾರ ಶ್ರೀನಿವಾಸ ಗೌಡ ಮಾತನಾಡಿ ‘ಕಂಬುಲ’ ಸಿನಿಮಾ ಮಾಡುವ ಮೊದಲೇ ಒಂದು ವರ್ಷಗಳ ಕಾಲ ಕಂಬಲದ ಬಗ್ಗೆ ಪೂರ್ಣವಾಗಿ ಈ ಟೀಮ್ ನವರು ಅರಿತುಕೊಂಡಿದ್ದಾರೆ. ಹಿಂದಿನ ಕಂಬಳ, ಈಗ ನಡೆಯುತ್ತಿರುವ ಕಂಬಳ, ಕಂಬಳದ ಒಳಗಿರುವ ಮರ್ಮವನ್ನೂ ಉತ್ತಮವಾಗಿ ಈ ಸಿನಿಮಾದಲ್ಲಿ ಚಿತ್ರಿಸಿದ್ದಾರೆ. ಸಿನಿಮಾದಲ್ಲಿ ಅಭಿನಯಿಸಲು ಮೊದಮೊದಲು ಕಷ್ಟವಾಯಿತು. ನಂತರ ಹಿರಿಯರು ಮತ್ತು ಸ್ವರಾಜ್ ಶೆಟ್ಟಿಯವರು ಉತ್ತಮ ಸಹಕಾರ ನೀಡಿರುವುದರಿಂದ ಅಭಿನಯಿಸಿದೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದರೆ ಮುಂದೆಯೂ ಅಭಿನಯಿಸುವೆ ಆದರೆ ಕಂಬಳವನ್ನು ಬಿಟ್ಟು ಅಲ್ಲ.ಕಂಬಳದಲ್ಲಿ ಕೋಣವನ್ನು ಓಡಿಸುವುದು ಇಷ್ಟ ಆದ್ದರಿಂದ ಮೊದಲ ಆದ್ಯತೆ ಕಂಬಳಕ್ಕೆ ಎಂದು ಅವರು ಹೇಳಿದರು.ಈ ಸಂದರ್ಭ ರಾಜೇಶ್ ಕುಡ್ಲ, ಕಲಾ ನಿರ್ದೇಶಕ ಚಂದ್ರಶೇಖರ ಸುವರ್ಣ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.