ವರದಿ:ನಿಶಾ,ಬೆಳ್ತಂಗಡಿ
ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯು ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾಂಬೂರಿಯಲ್ಲಿ ವಿಶೇಷವಾಗಿ ವಿಜ್ಞಾನ ಮೇಳವನ್ನು ಆಯೋಜಿಸಲಾಗಿದೆ.ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಇದು ಪೂರಕವಾಗಿದ್ದು,ಸಾವಿರಾರು ವಿದ್ಯಾರ್ಥಿಗಳು,ಸ್ಥಳೀಯರು ಸೇರಿದಂತೆ ರಾಜ್ಯ,ದೇಶಗಳಿಂದಲೂ ಜನರಾಗಮಿಸಿ ಇದನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.ವಿಶೇಷವಾಗಿ ಇಲ್ಲಿ ಕೊರೋನಾ ಪತ್ತೆ ಮಾಡಬಲ್ಲ ಮನೆ ಗೇಟ್ ಅಚ್ಚರಿಗೆ ಕಾರಣವಾಗುತ್ತಿದೆ. ಮತ್ತೊಂದೆಡೆ ಕೊರೊನಾ ರೋಗಿಗಳ ಸೇವೆ ಮಾಡುವ ರೋಬೋಟಿಕ್ ನರ್ಸ್ ನ್ನು ನೋಡಿ ಜನ ಆಶ್ಚರ್ಯ ಸೂಚಿಸುತ್ತಿದ್ದಾರೆ.
ಕೋವಿಡನ್ನು ಪತ್ತೆ ಹಚ್ಚುತ್ತೆ ಈ ಮನೆ ಗೇಟ್:
ಸ್ವತಃ ವಿದ್ಯಾರ್ಥಿಗಳೇ ಹೊಸ ಆವಿಷ್ಕಾರಗಳನ್ನು ಮಾಡಿ ಆಧುನಿಕ ಜಗತ್ತಿಗೆ ಪೂರಕವಾಗುವಂತಹ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸುವ ವಿಧಾನವನ್ನು ತಯಾರಿಸಿ ಜಾಂಬೂರಿಯಲ್ಲಿ ಪ್ರದರ್ಶನಕ್ಕಾಗಿ ಇಡಲಾಗಿದೆ. ಅದರ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳೇ ಮಾಹಿತಿಯನ್ನು ನೀಡುತ್ತಿದ್ದು,ನೋಡುಗರನ್ನು ದಿಗ್ಭ್ರಾಂತಗೊಳಿಸುವಂತೆ ಮಾಡುತ್ತಾರೆ.ದೀಕ್ಷಿತ್ ಹಾಗೂ ಪ್ರೇಕ್ಷಿತ್ ರಾಮಕುಂಜರವರು ವಿದ್ಯುತ್ ನಿಯಂತ್ರಿತ ಮನೆಯನ್ನು ಪ್ರಾಯೋಗಿಕವಾಗಿ ನಿರ್ಮಿಸಿದ್ದಾರೆ.ಕೋವಿಡ್ನಂತಹ ಮಾರಕ ಕಾಯಿಲೆಗಳು ಬಂದರೆ ಜ್ವರದ ಗುಣಲಕ್ಷಣ ಹೊಂದಿದ್ದರೆ ಪರೀಕ್ಷೆ ಮಾಡಲು ವಿದ್ಯುನ್ಮಾನ ನಿರ್ಮಿತ ಗೇಟ್ ಪ್ರಯೋಜನಕಾರಿಯಾಗಿದೆ.ಜ್ವರದ ಲಕ್ಷಣಗಳಿದ್ದರೆ ಈ ಗೇಟ್ ತೆರೆದುಕೊಳ್ಳುವುದಿಲ್ಲ. ಜ್ವರದ ಲಕ್ಷಣಗಳಿಲ್ಲದಿದ್ದರೆ ತನ್ನಷ್ಟಕ್ಕೆ ಮನೆ ಬಾಗಿಲು ತೆರೆದುಕೊಳ್ಳುತ್ತದೆ. ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನರ್ಸ್ ಸ್ಥಾನ ತುಂಬುತ್ತೆ ರೋಬೋಟಿಕ್ ನರ್ಸ್:
ಸಿದ್ದಾರ್ಥ ಇಂಜಿನಿಯರಿಂಗ್ ತುಮಕೂರು ಕಾಲೇಜಿನ ೧೮ ವಿದ್ಯಾರ್ಥಿಗಳು ಐದು ತಂಡಗಳೊಂದಿಗೆ ಐದು ವಿವಿಧ ಪ್ರಾಜೆಕ್ಟ್ ಗಳನ್ನು ಮಾಡಿದ್ದಾರೆ. ಅವುಗಳಲ್ಲಿ ವಿಶೇಷವಾಗಿ ರೋಬೋ ಆ್ಯಂಬ್ಯು(ರೋಬೋಟಿಕ್ ಆ್ಯಂಬುಲೆನ್ಸ್) ಮೊಡಲ್ನ್ನು ಉಪನ್ಯಾಸಕ ಪ್ರವೀಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ದಗೊಳಿಸಿದ್ದು ರೋಮಾಂಚನಕಾರಿಯಾಗಿದೆ. ಅಭಿಷೇಕ್,ಅನುಷಾ, ಅಮೃತಾ, ಅಬ್ದುಲ್ ಗಫೂರ್ ವಿಶೇಷವಾಗಿ ಈ ತಂಡದಲ್ಲಿದ್ದು, ಕೋವಿಡ್ -೧೯ ಸಂದರ್ಭದಲ್ಲಿ ಡಾಕ್ಟರ್, ನರ್ಸ್ ಕೊರತೆ ಹೊಂದಿರುವುದನ್ನು ಮನಗಂಡು ಈ ಪ್ರಾಜೆಕ್ಟ್ ರೆಡಿ ಮಾಡಿದ್ದಾರೆ.
ಇದೀಗ ಮತ್ತೆ ಬಿಎಫ್.೭ ಆತಂಕ ಶುರುವಾದ ಹಿನ್ನಲೆಯಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಕೋವಿಡ್ ಸಂದರ್ಭಗಳಲ್ಲಿ ನರ್ಸ್ ಗಳು ರೋಗಿಗಳನ್ನು ಮುಟ್ಟುವಂತೆ ಇರಲಿಲ್ಲ. ಇದನ್ನೆಲ್ಲಾ ಗಮನಿಸಿದ ವಿದ್ಯಾರ್ಥಿಗಳು ರೋಬೋಟಿಕ್ ನರ್ಸ್ ಎಂಬ ಹೊಸ ಕಾನ್ಸೆಪ್ಟನ್ನು ಕಂಡು ಹಿಡಿದು ಸ್ವತಃ ರೋಬೋಟ್ ರೋಗಿ ಬಳಿಗೆ ತೆರಳಿ ಚಿಕಿತ್ಸೆಯನ್ನು ನೀಡುವಂತೆ ಮಾಡಲು ಈ ಆವಿಷ್ಕಾರ ಮಾಡಿದ್ದಾರೆ. ಇದರ ವಿಶೇಷತೆ ಏನೆಂದರೆ ರೋಗಿಯ ಟೆಂಪರೇಚರ್ ಲೆವೆಲ್, ಆಕ್ಸಿಜನ್ ಮೀಟರ್ ಪರೀಕ್ಷೆ ಮಾಡಲು ಹಾಗೂ ರೋಗಿಯ ಬ್ಲಡ್ ಟೆಸ್ಟ್ ಸ್ಯಾಂಪಲ್ ತಗೊಂಡು ,ಬ್ಲಡ್ ಟೆಸ್ಟ್ ಮಾಡಿ ಶುಗರ್ ಜಾಸ್ತಿ ಇದ್ದರೆ ತುರ್ತು ಚಿಕಿತ್ಸೆಗೆ ಕೊಂಡೊಯ್ಯಲು ಇದು ಸೂಚನೆ ನೀಡುತ್ತದೆ. ಹಳ್ಳಿಗಳಲ್ಲಿ ಡಾಕ್ಟರ್, ನರ್ಸ್ ಗಳಿಲ್ಲದಿದ್ದರೆ ಐಸೋಲೇಶನ್ ಪೇಷೆಂಟ್ಗಳನ್ನು ಟ್ರಿಟ್ಮೆಂಟ್ಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ರೋಬೋಟ್ಗಳನ್ನು ಕಳಿಸಲಾಗ್ತದೆ. ಅಷ್ಟು ಮಾತ್ರವಲ್ಲದೇ ಮುಂದಿನ ದಿನಗಳಲ್ಲಿ ಹಳ್ಳಿ, ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಸಂದರ್ಭದಲ್ಲಿ ಡ್ರೋನ್ ಮೂಲಕ ಈ ರೋಬೋಟ್ನ್ನು ಕಳಿಸುವ ಯೋಜನೆಯನ್ನು ಹಾಕಲಾಗಿದೆ ಎಂದು ಮಾರ್ಗದರ್ಶಕರಾದ ಪ್ರವೀಣ್ ಕುಮಾರ್ ಅವರು ಮಾಹಿತಿಯನ್ನು ನೀಡಿದರು.
ಗುಡ್ಡಕುಸಿತವನ್ನು ತಡೆಯುತ್ತೆ:
ಮಂಗಳೂರು ಶಾರದ ವಿದ್ಯಾಲಯದ ಮಯೂರ್ ನಾಯಕ್ ಅವರು ಮಣ್ಣು ಕುಸಿತವಾಗುವುದನ್ನು ತಡೆಯುವುದಕ್ಕಾಗಿ ಲ್ಯಾಂಡ್ ಸ್ಯಾಂಡ್ ಡಿಟೆಕ್ಟರ್ ತಂತ್ರಜ್ಞಾನ ತಯಾರಿಸಿದ್ದು ಇದು ಕೂಡ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.