ನ್ಯೂಸ್ ನಾಟೌಟ್: ಕೊರೊನಾ ಅಟ್ಟಹಾಸ ಮತ್ತೆ ಆರಂಭವಾಗಿರುವ ಬೆನ್ನಲ್ಲೇ ರಾಜ್ಯ ಸರಕಾರ ವಿವಿಧ ಜಿಲ್ಲೆಗಳಿಗೆ ಅಲರ್ಟ್ ಆಗಿರುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೋವಿಡ್ ರೋಗಿಗಳಿಗೆಂದೇ 100 ಆಮ್ಲಜನಕಯುಕ್ತ ಹಾಸಿಗೆಗಳ ವಿಭಾಗಗಳನ್ನು ತೆರೆಯಲಾಗಿದೆ. ಕೋವಿಡ್ ರೋಗಿಗಳಿಗೆ ಮಾತ್ರವೇ ಇಲ್ಲಿ ದಾಖಲಾಗಲು ಅವಕಾಶವಿದೆ.
ಇದರ ಜತೆಗೆ, ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿರುವ 400 ಹಾಸಿಗೆಗಳ ಪೈಕಿ 250 ಆಮ್ಲಜನಕಯುಕ್ತ ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳಲಾಗಿದೆ. ಒಟ್ಟಾರೆ, ಮಡಿಕೇರಿ ನಗರವೊಂದರಲ್ಲೇ ಒಟ್ಟು 350 ಆಮ್ಲಜನಕಯುಕ್ತ ಹಾಸಿಗೆಗಳು ಸಿದ್ಧವಿದ್ದು, ಸಾಂಭವ್ಯ ಪರಿಸ್ಥಿತಿಯನ್ನು ಎದುರಿಸಲು ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ಕಡೆಯೂ ಕೋವಿಡ್ ರೋಗಕ್ಕೆ ಚಿಕಿತ್ಸೆ ನೀಡುವ ತಜ್ಞ ವೈದ್ಯರು, ಶೂಶ್ರೂಷಕರು ಇದ್ದಾರೆ. ರೋಗಿಗಳಿಗೆ ಊಟ, ಉಪಾಹಾರದ ವ್ಯವಸ್ಥೆಯೂ ಇರಲಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 500 ಎಲ್ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನಾ ಘಟಕ, ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ 1 ಸಾವಿರ ಎಲ್ಪಿಎಂ ಸಾಮರ್ಥ್ಯದ ಘಟಕಗಳು ಇವೆ. ಇದರೊಂದಿಗೆ ಆಸ್ಪತ್ರೆಯಲ್ಲಿ 26 ಕೆ.ಎಲ್ ಸಾಮರ್ಥ್ಯದ ಲಿಕ್ವಿಡ್ ಆಮ್ಲಜನಕದ ಘಟಕವೂ ಇದೆ. ಜಿಲ್ಲೆಯಲ್ಲಿ ಗಂಟಲು ದ್ರವ ಪರೀಕ್ಷೆಯ ಸಂಖ್ಯೆಯನ್ನು ಮಂಗಳವಾರದಿಂದಲೆ ಹೆಚ್ಚಿಸಲಾಗಿದೆ. ಇದುವರೆಗೂ 300 ಪರೀಕ್ಷೆಗಳು ನಡೆಯುತ್ತಿದ್ದವು. ಮಂಗಳವಾರ ಒಂದೇ ದಿನ 500ಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇವುಗಳ ಫಲಿತಾಂಶ ಬುಧವಾರ ಬರಲಿದೆ. ಕೋವಿಡ್ ಕುರಿತು ಸಾರ್ವಜನಿಕರಲ್ಲಿ ಅನಗತ್ಯವಾದ ಭಯ ಬೇಡ. ಆದರೆ, ಎಚ್ಚರಿಕೆ ಇರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ತಿಳಿಸಿದ್ದಾರೆ.