ನ್ಯೂಸ್ ನಾಟೌಟ್ : ಬಡವರಿಗೆ ವಿಶೇಷವಾಗಿ ಒಂದು ವರ್ಷಗಳ ಕಾಲ ಉಚಿತ ಪಡಿತರವನ್ನು ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೊಷಣೆ ಮಾಡಿದೆ.
ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಹೊಸ ಉಡುಗೊರೆ ನೀಡುತ್ತಿದೆ. ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್ ಎಪ್ ಎಸ್ ಎ ) ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷ ಕಾಲ ಉಚಿತವಾಗಿ ಪಡಿತರವನ್ನು ವಿತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೊಷಿಸಿದೆ.
ಕೋವಿಡ್ ಕಾರಣ 28 ತಿಂಗಳಿನಿಂದ ಈವರೆಗೆ ಜಾರಿಯಲ್ಲಿದ್ದ ಉಚಿತ ಪಡಿತರ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅವಧಿ ಡಿ.31ಕ್ಕೆ ಮುಕ್ತಾಯವಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸಿ , ಅದನ್ನು ಆಹಾರ ಭದ್ರತಾ ಕಾಯ್ದೆಯಡಿ ವಿಲೀನ ಮಾಡಿ ಉಚಿತ ಪಡಿತರ ನೀಡಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿದೆ.
ಎನ್ ಎಫ್ ಎಸ್ ಎ ಅಡಿಯಲ್ಲಿ ಈಗಾಗಲೇ ಪ್ರತಿ ವ್ಯಕ್ತಿಗೆ ಕೆಜಿಗೆ 2ರಿಂದ 3ರ ದರದಲ್ಲಿ 5ಕೆಜಿ ಆಹಾರ ಧಾನ್ಯಗಳನ್ನು ಕೇಂದ್ರದಿಂದ ಪೂರೈಸಲಾಗುತ್ತದೆ. ಹಾಗೆಯೇ ಅಂತ್ಯೋದಯ ಅನ್ನ ಯೊಜನೆಗೆ ಒಳಪಡುವ ಕುಟುಂಬಗಳಿಗೆ 35 ಕೆಜಿ ಧಾನ್ಯ ವಿತರಿಸಲಾಗುತ್ತದೆ. ಈ ಯೋಜನೆಯಡಿ ಅಕ್ಕಿಯನ್ನು ಕೆಜಿಗೆ 3ರೂ ಹಾಗೂ ಗೋಧಿಯನ್ನು ಕೆಜಿಗೆ 2ರೂ ದರದಲ್ಲಿ ವಿತರಿಸಲಾಗುವುದು. ಆದರೆ ಇದರ ಬದಲು ಇನ್ನು 1ವರ್ಷ ಕಾಲ ಪಡಿತರನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಹಾಗೂ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಸಂಪುಟ ಸಭೆಯ ಬಳಿಕ ಹೇಳಿದ್ದಾರೆ. ಒಟ್ಟಾರೆ ಪಡಿತರಕ್ಕೆ ಕೇಂದ್ರ ಸರ್ಕಾರ ಇನ್ನು ಮಾಡುವ ಖರ್ಚು ವಾರ್ಷಿಕ 2ಲಕ್ಷ ಕೋಟಿ ರೂ ಗೆ ಹೆಚ್ಚಲಿದೆ. ಸಚಿವ ಸಂಪುಟದ ಈ ನಿರ್ಧಾರವನ್ನು ಶ್ಲಾಘಿಸಿರುವ ಸರ್ಕಾರಿ ಅಧಿಕಾರಿಗಳು , ಇದು ಬಡವರಿಗೆ ನೀಡಲಾದ ಹೊಸ ವರ್ಷದ ಉಡುಗೊರೆ. ನಯಾ ಪೈಸೆಯನ್ನೂ ಬಡವರು ಪಡಿತರಕ್ಕೆ ಖರ್ಚು ಮಾಡಬೇಕಿಲ್ಲ ಎಂದು ಹೇಳಿದ್ದಾರೆ.