ನ್ಯೂಸ್ ನಾಟೌಟ್ : ದೇಶಕ್ಕೆ ಬಿಎಫ್ ೭ ವೈರಸ್ ಲಗ್ಗೆಯಿಟ್ಟಿದೆ. ದೇಶ-ವಿದೇಶಗಳಲ್ಲಿ ತಾಂಡವವಾಡುತ್ತಿರುವ ಈ ವೈರಸ್ ಗೆ ಮೂಗು ದಾರ ಹಾಕಲು ಹರಸಾಹಸ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಆತಂಕ ಮನೆಮಾಡಿದೆ. ದಕ್ಷಿಣ ಕೊರಿಯಾದಲ್ಲಿ ಮೆದುಳು ತಿನ್ನುವ ಅಮೀಬಾಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ಮೂಲಕ ದಕ್ಷಿಣ ಕೊರಿಯಾದಲ್ಲಿ ಈ ಸೋಂಕಿಗೆ ಮೊದಲ ಸಾವು ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಏನಿದು ಅಮೀಬಾ?
ಥಾಯ್ಲೆಂಟ್ನಲ್ಲಿ ವಾಸವಾಗಿದ್ದ 50 ವರ್ಷದ ವ್ಯಕ್ತಿಯೊಬ್ಬರು ಎರಡು ವಾರಗಳ ಹಿಂದೆ ಕೊರಿಯಾಗೆ ಮರಳಿದ್ದು, ಕೆಲವೇ ದಿನಗಳಲ್ಲಿ ಮೆದುಳು ತಿನ್ನುವ ಅಮೀಬಾ ಅವರನ್ನು ಬಲಿ ತೆಗೆದುಕೊಂಡಿದೆ. ನಗ್ಗೆರಿಯಾ ಫೌಲೇರಿ ಸೋಂಕು ಎಂದು ಕರೆಯಲ್ಪಡುವ ಈ ಕಾಯಿಲೆಗೆ ದಕ್ಷಿಣ ಕೊರಿಯಾದಲ್ಲಿ ಮೊದಲ ಸಾವು ದಾಖಲಾದಂತಾಗಿದೆ.ಜ್ವರ, ತಲೆನೋವು, ವಾಂತಿ ಮಾಡುವ ವೇಳೆ ತೊದಲುವಿಕೆ, ಕುತ್ತಿಗೆಯಲ್ಲಿ ಬಿಗಿತ ಮುಂತಾದ ರೋಗ ಲಕ್ಷಣಗಳ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕಕ್ಕೆ ಸೇರಿಸಲಾಗಿತ್ತು. ಮೆದುಳು ಪೊರೆ ಉರಿತದ ಸಮಸ್ಯೆ ಇದಾಗಿತ್ತು. ತಪಾಸಣೆ ವೇಳೆ ಅವರಿಗೆ ನಗ್ಗೆರಿಯ ಫೌಲೇರಿ ಸೋಂಕು ಇರುವುದು ದೃಢಪಟ್ಟಿತ್ತು. ಇದೀಗ ಅವರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹೇಗೆ ಹರಡುತ್ತದೆ?
ಮಲಿನಗೊಂಡ ನೀರಿನಲ್ಲಿ ಈಜುವುದು, ಸೋಂಕಿನ ನೀರಿನಲ್ಲಿ ಮೂಗು ತೊಳೆಯುವುದು ಮುಂತಾದವುಗಳ ಮೂಲಕ ಈ ಸೋಂಕು ಮನುಷ್ಯನಿಗೆ ಹರಡುತ್ತದೆ. ನಗ್ಗೆರಿಯಾ ಫೌಲೇರಿ ಎಂಬ ಅಮೀಬಾದ ಮೂಲಕ ಹರಡುತ್ತದೆ ಎಂದು ಹೇಳಲಾಗಿದೆ. ಮಣ್ಣು, ಸರೋವರ, ನದಿಯಲ್ಲಿ ಈ ಅಮೀಬಾ ಇರುತ್ತದೆ. ಅಮೀಬಾ ಇದ್ದ ನೀರು ಮನುಷ್ಯನ ಮೂಗು ಸೇರಿದರೆ ಅದು ನೇರವಾಗಿ ಮೆದುಳಿಗೆ ಸೇರಿ ಸೋಂಕು ಉಲ್ಬಣಿಸಲು ಕಾರಣವಾಗುತ್ತದೆ. ಈ ಕಾರಣದಿಂದಲೇ ‘ಮೆದುಳು ತಿನ್ನುವ ಅಮೀಬಾ’ ಎಂಬುದಾಗಿ ಈ ಅಮೀಬಾವನ್ನು ಕರೆಯಲಾಗುತ್ತದೆ.
ಇನ್ನು ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಅಮೆರಿಕಾದಲ್ಲಿ ಪ್ರತಿ ವರ್ಷ ಮೂವರು ಸಾವನ್ನಪ್ಪುತ್ತಿದ್ದಾರೆ. 1965ರಲ್ಲಿ ಆಸ್ಟ್ರೇಲಿಯಾದಲ್ಲಿ ಈ ಸೋಂಕು ಪತ್ತೆಯಾಗಿತ್ತು. ಅದೇ ವರ್ಷದಲ್ಲಿ ಈ ಸೋಂಕಿನಿಂದ ಮೂವರು ಸಾವನ್ನಪ್ಪಿದ್ದರು.