ನ್ಯೂಸ್ ನಾಟೌಟ್ : ಅದ್ಯಾಕೋ ಏನೋ,ನಮ್ಮ ನಾಲಗೆ ರುಚಿ ರುಚಿಯಾಗಿರೋದನ್ನೇ ತಿನ್ನು ಅಂತ ಹೇಳುತ್ತೆ..ಆದರೆ ಹೊಟ್ಟೆ ನನಗೆ ಮೆಚ್ಚುವಂತಹ ಆಹಾರವನ್ನು ಕೊಡು ಅಂತದೆ..ಕಡೆಗೆ ನಮಗೆ ಬೇಕಾಗಿದ್ದು ಆರೋಗ್ಯ.ತಿನ್ನುವ ವಿಚಾರದಲ್ಲಿ ಒಮ್ಮೆ ಯಾಮಾರಿ ಬಿಟ್ಟರೆ ಜೀವನ ಪರ್ಯಂತ ಅದರ ಕಷ್ಟವನ್ನು ಅನುಭವಿಸಬೇಕಾದವರು ನಾವೇ . ಅದಕ್ಕಾಗಿ ನಾವು ಶುದ್ಧ ಆಹಾರವನ್ನೇ ಸೇವಿಸಬೇಕು. ನಿತ್ಯವು ನಾವು ಸೇವಿಸುವ ಆಹಾರದ ಬಗ್ಗೆ ಕಾಳಜಿ ವಹಿಸಬೇಕು.ಅದರಲ್ಲೂ ಮನೆಯಲ್ಲಿ ಅಥವಾ ಹೊಟೇಲ್ ಗಳಲ್ಲಿ ಮೈದಾ ಮಿಶ್ರಣದ ತಿಂಡಿ ಇಷ್ಟ ಪಡುವವರು ಇದನ್ನು ಓದಲೇ ಬೇಕು.
ಮೈದಾ ಹಿಟ್ಟು:
ಮೈದಾಹಿಟ್ಟು ಆರೋಗ್ಯಕ್ಕೆ ಮಾರಕ ಎಂದು ತಿಳಿದರೂ ಮೈದಾದಿಂದ ಮಾಡಿದ ಆಹಾರವನ್ನು ತಿನ್ನುವುದು ಮಾತ್ರ ಕಡಿಮೆ ಮಾಡುವುದಿಲ್ಲ. ಸಮೋಸಾ, ಬನ್ಸ್ ಹೆಚ್ಚಾಗಿ ಎಲ್ಲಾ ತಿಂಡಿ ಪದಾರ್ಥಗಳು ಮೈದಾಹಿಟ್ಟಿನಿಂದಲೇ ತಯಾರಾಗುತ್ತದೆ.ಅದರಲ್ಲೂ ರೋಡ್ ಸೈಡ್ ಆಹಾರ ಹಾಗೂ ಬೇಕರಿ ತಿಂಡಿಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರ ಸಂಖ್ಯೆ ಹೆಚ್ಚು.ಮಿತಿ ಮೀರಿ ತಿಂದರೆ ಅನಾರೋಗ್ಯ ಕಾಡುವುದು ಖಚಿತ.
ಮೈದಾವನ್ನು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಿದ್ದರೆ ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ಅಪಧಮನಿಗಳನ್ನು ಮುಚ್ಚುತ್ತದೆ. ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಸಂಸ್ಕರಿಸಿದ ಮೈದಾ ಹಿಟ್ಟಿನ ಸೇವನೆ ಮಾಡಿದಾಗ ಆಹಾರದಲ್ಲಿರುವ ಶೇಕಡಾ 80ರಷ್ಟು ಫೈಬರ್ ನಾಶವಾಗುತ್ತದೆ. ಇದರಿಂದ ದೇಹಕ್ಕೆ ಅಗತ್ಯವಿರುವ ಫೈಬರ್ ಸಿಗುವುದಿಲ್ಲ. ನಾರಿನಂಶವಿಲ್ಲದ ಕಾರಣ ಕರುಳು, ದೇಹದ ಕೊಳೆಯನ್ನು ಶುದ್ಧಿಗೊಳಿಸಿ ವಿಷವನ್ನು ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ನಮ್ಮ ದೇಹಕ್ಕೆ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತದೆ.ಕೆಲವರು ಬೆಳಗ್ಗಿನ ಸಮಯದಲ್ಲಿ ವೈಟ್ ಬ್ರೆಡ್ ತಿನ್ನುತ್ತಾರೆ. ರುಚಿಕರವಾದ ಬ್ರೆಡ್ ದೇಹಕ್ಕೆ ದೊಡ್ಡ ಮಟ್ಟದ ಹಾನಿ ಉಂಟು ಮಾಡಬಹುದು. ಪ್ರತಿ ದಿನ ವೈಟ್ ಬ್ರೆಡ್ ಸೇವನೆ ಮಾಡುವುದನ್ನು ಕಡಿಮೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಉತ್ತಮ. ಪ್ರತಿನಿತ್ಯ ಬ್ರೆಡ್ ಸೇವನೆ ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತೆ. ಗ್ಯಾಸ್, ಮಲಬದ್ಧತೆ ಮತ್ತು ಮಧುಮೇಹದಂತಹ ಸಮಸ್ಯೆ ಉಂಟಾಗಬಹುದು.
ಫ್ರೋಜನ್ ಫುಡ್ :
ಫ್ರೋಜನ್ ಫುಡ್ ಗಳಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನಗಳು ಇಲ್ಲ, ದುಷ್ಪರಿಣಾಮಗಳೇ ಹೆಚ್ಚು. ಫ್ರೋಜನ್ ಫುಡ್ ಸೇವನೆ ನಿಧಾನವಾಗಿ ನಮ್ಮ ದೇಹವನ್ನು ವಿಷಗೊಳಿಸುವ ಕೆಲಸ ಮಾಡುತ್ತದೆ. ಇಂಥ ಆಹಾರವನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಸೋಡಿಯಂ ಮತ್ತು ಕೃತಕ ಸಂರಕ್ಷಕಗಳನ್ನು ಬಳಸಲಾಗುತ್ತದೆ. ಈ ಎರಡೂ ಸಂಯುಕ್ತಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಘನೀಕೃತ ಆಹಾರದಲ್ಲಿ ವಿಟಮಿನ್ ನಾಶವಾಗುತ್ತದೆ. ಇದರಲ್ಲಿ ಶೇಕಡಾ 70ರಷ್ಟು ಸೋಡಿಯಂ ಬಳಕೆ ಮಾಡಲಾಗುತ್ತದೆ. ಅತಿಯಾದ ಸೋಡಿಯಂ ಬಳಕೆಯಿಂದ ಅಧಿಕ ರಕ್ತದೊತ್ತಡ ಕಾಡುವ ಸಾಧ್ಯತೆಯಿರುತ್ತದೆ. ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಇವುಗಳ ಸೇವನೆ ಆದಷ್ಟು ಕಡಿಮೆ ಮಾಡಿದರೆ ಆರೋಗ್ಯ ರಕ್ಷಣೆಯಾಗ ಬಹುದು.