ನ್ಯೂಸ್ ನಾಟೌಟ್ : ಮಗಳನ್ನು ಮದುವೆ ಮಾಡಿಕೊಡುವುದಕ್ಕೆ ನಿರಾಕರಿಸಿದರು ಎನ್ನುವ ಒಂದೇ ಕಾರಣಕ್ಕೆ ಗುಂಪು ಕಟ್ಟಿಕೊಂಡು ಬಂದ ವ್ಯಕ್ತಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಉಸ್ಮಾನ್ ಬ್ಯಾರಿ ಎಂಬ ವ್ಯಕ್ತಿಯ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂಬ ಬೇಡಿಕೆಯನ್ನು ನಿಝಾಮುದ್ದೀನ್ ಎಂಬ ಯುವಕ ಇಟ್ಟಿದ್ದ. ಆದರೆ ಉಸ್ಮಾನ್ ಹಾಗೂ ಮನೆಯವರು ಇದನ್ನು ನಿರಾಕರಿಸಿದ್ದರು. ಇದರಿಂದ ಕೋಪೋದ್ರಿಕ್ತನಾದ ನಿಝಾಮುದ್ದಿನ್ ತಂಡವನ್ನು ಕಟ್ಟಿಕೊಂಡು ಉಸ್ಮಾನ್ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಆಯೋಧ್ಯಾ ನಗರದ ತಾಹೀರಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಆರು ಮಂದಿಯ ತಂಡ ನಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ನನಗೆ ಮತ್ತು ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಪದಗಳಿಂದ ಬೈದು, ನನ್ನ ಮೈದುನನಾದ ಯೂಸುಫ್ ರವರನ್ನು ಪೋನ್ ಮಾಡಿ ಕರೆಯಿಸಿ , ಅವರ ಮೇಲೆಯೂ ಹಲ್ಲೆ ನಡೆಸಿದರು. ಈ ವೇಳೆ ನಾನು ಮತ್ತು ಗಂಡ ಉಸ್ಮಾನ್ರವರು ಬಿಡಿಸಲು ಹೋದಾಗ, ನಿಝಾಮುದ್ದೀನನು ತಂದಿದ್ದ ಚೂರಿಯಿಂದ ನನ್ನ ಗಂಡ ಉಸ್ಮಾನ್ ಬ್ಯಾರಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಎದೆಗೆ ಚೂರಿಯಿಂದ ತಿವಿದ ಉಳಿದ ಆರೋಪಿಗಳು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ನಿಮ್ಮೆಲ್ಲರನ್ನೂ ಜೀವ ಸಹಿತ ಬದುಕಲು ಬಿಡುವುದಿಲ್ಲವೆಂದೂ ಬೆದರಿಕೆಯೊಡ್ಡಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡ ಉಸ್ಮಾನ್ ಬ್ಯಾರಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.