ನ್ಯೂಸ್ ನಾಟೌಟ್: ಬಾಳಿ ಬದುಕಬೇಕಾಗಿದ್ದ ನವ ಜೋಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ ನ.5 ರಂದು ತಿಪ್ಪಣ್ಣ ಹೊಸಮನಿ (34) ಮತ್ತು ಪತ್ನಿ ಸುಜಾತಾ (30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮುದ್ದೇಬಿಹಾಳದ ಕೆಸಾಪೂರ ಗ್ರಾಮಕ್ಕೆ ಸೇರಿದ್ದ ಸುಜಾತರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ ಮುದ್ದೇಬಿಹಾಳ ನಗರದಲ್ಲೇ ಮನೆ ಮಾಡಿಕೊಂಡು ದಂಪತಿ ವಾಸವಾಗಿದ್ದರು. ಮೃತ ತಿಪ್ಪಣ್ಣ ಬೆಂಗಳೂರಿನ ಖಾಸಗಿ ವಾಹಿನಿಯೊಂದರಲ್ಲಿ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದರು. ತಿಪ್ಪಣ್ಣ ಕೆಲ ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಊರಿಗೆ ವಾಪಸ್ ಆಗಿದ್ದರು ಎಂದು ತಿಳಿದು ಬಂದಿದೆ. ಇಬ್ಬರು ಮುದ್ದೇಬಿಹಾಳದ ಮನೆಯಲ್ಲಿರುವ ಅಕ್ಕ-ಪಕ್ಕದ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.