ನ್ಯೂಸ್ ನಾಟೌಟ್ : ನಮ್ಮ ಸಮಾಜ ಮಠಾಧೀಶರಿಗೆ ವಿಶೇಷವಾದ ಗೌರವದ ಸ್ಥಾನ ಮಾನ ಕೊಟ್ಟಿದೆ. ಪೂಜನೀಯರು ಅನ್ನುವ ಹಕ್ಕನ್ನು ನೀಡಿದೆ. ಅಂತಹ ಸ್ವಾಮೀಜಿಗಳ ಘನತೆಗೆ ಧಕ್ಕೆ ಬಂದರೆ ಅದನ್ನು ಯಾರಿಗೂ ಸಹಿಸಲು ಸಾಧ್ಯವಾಗುವುದಿಲ್ಲ. ಇದೀಗ ಒಕ್ಕಲಿಗ ಸಮುದಾಯದ ಸ್ವಾಮೀಜಿಯೊಬ್ಬರ ಗೌರವಕ್ಕೆ ಧಕ್ಕೆ ಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಹ ತಪ್ಪನ್ನು ಸಚಿವರೊಬ್ಬರು ಮಾಡಿರುವುದರಿಂದ ಸಹಜವಾಗಿಯೇ ವಿವಾದ ಮತ್ತಷ್ಟು ಹೊತ್ತಿಕೊಂಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿ ಪ್ರತಿಮೆಯನ್ನು ಅನಾವರಣ ಮಾಡುವ ವೇಳೆ ಸಚಿವ ಆರ್.ಅಶೋಕ್ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಹೆಗಲ ಮೇಲೆ ಕೈ ಹಾಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್..ಅಶೋಕ್ ಹೀಗೆ ನಡೆದುಕೊಂಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಸ್ವಾಮೀಜಿಗಳ ಹೆಗಲ ಮೇಲೆ ಕೈ ಹಾಕುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಮಾತ್ರವಲ್ಲ ಸ್ವಾಮೀಜಿ ಎಂದರೆ ಅವರಿಗೆ ಅವರದ್ದೇ ಆದ ಗೌರವವಿರುತ್ತದೆ, ಘನತೆ ಇರುತ್ತದೆ. ಹೀಗಿದ್ದರೂ ಒಬ್ಬರು ಶ್ರೀಗಳ ಮೇಲೆ ಕೈ ಹಾಕುವುದು ಎಷ್ಟು ಸರಿ? ಇದೇ ರೀತಿ ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯ ನಿಮಗಿದೆಯೇ? ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.