ನ್ಯೂಸ್ ನಾಟೌಟ್ : ತುಳುನಾಡಿನ ಜನರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಕಾರ್ಣಿಕದ ಶಕ್ತಿ ಅಪಾರ. ಅಜ್ಜ ಎಂದು ಕರೆದರೆ ಸಮಸ್ಯೆಗಳನ್ನು ತೊಂದರೆ ತಾಪತ್ರೆಯಗಳನ್ನು ದೂರ ಮಾಡುವ ನಂಬಿಕೆ ಭಕ್ತರದ್ದು. ಕರಾವಳಿ ಮಾತ್ರವಲ್ಲ ರಾಜ್ಯ, ದೇಶ ಈಗ ವಿದೇಶದಲ್ಲೂ ಅಜ್ಜನ ಕಾರ್ಣಿಕದ ಶಕ್ತಿ ಬೆಳಗಿದೆ. ಅಜ್ಜನ ಸನ್ನಿಧಾನಕ್ಕೆ ಭಕ್ತರು ಓಡೋಡಿ ಬರುತ್ತಿದ್ದಾರೆ. ತಮ್ಮ ಸಮಸ್ಯೆಗಳಿಗೊಂದು ಮುಕ್ತಿಯ ಮಾರ್ಗ ಕಂಡುಕೊಂಡು ಅಜ್ಜನಿಗೆ ಪ್ರಿಯವಾದ ಹರಕೆ ಸಲ್ಲಿಸುತ್ತಿದ್ದಾರೆ. ಇದೀಗ ದೂರದ ಉಕ್ರೇನ್ ದೇಶದಿಂದ ಭಕ್ತರೊಬ್ಬರು ಸ್ವಾಮಿ ಕೊರಗಜ್ಜನಿಗೆ ಶುಕ್ರವಾರ ಅಗೆಲು ಸೇವೆ ನೀಡಿ ಸುದ್ದಿಯಾಗಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹರಿಕೆ ತೀರಿಸಿದ ದಂಪತಿ
ಕಳೆದ ಕೆಲ ತಿಂಗಳ ಹಿಂದೆ ಉಕ್ರೇನ್ ನಿಂದ ಭಾರತ ಪ್ರವಾಸ ಕೈಗೊಂಡಿದ್ದ ಉಕ್ರೇನ್ ಪ್ರಜೆಗಳಾದ ಆ್ಯಂಡ್ರೋ, ಪತ್ನಿ ಎಲೆನಾ ಹಾಗೂ ಮಗ ಮ್ಯಾಕ್ಸಿಂ ಉಡುಪಿಯ ಮಲ್ಪೆ ಕಡಲ ತೀರಕ್ಕೆ ಬಂದಿದ್ದರು. ಈ ಸಂದರ್ಭ ಉಡುಪಿಯ ಗೋಶಾಲೆಗೆ ತೆರಳಿದ್ದ ಈ ಕುಟುಂಬ ನಾಡಿ ನೋಡಿ ಔಷಧಿ ಕೊಡುವ ಭಕ್ತಿ ಭೂಷಣ್ ಪ್ರಭೂಜಿಯವರನ್ನು ಭೇಟಿ ಮಾಡಿದ್ದರು. ಈ ಸಂದರ್ಭ ಅನಾರೋಗ್ಯಕ್ಕೆ ಒಳಗಾಗಿದ್ದ ಮಗನ ವಿಚಾರವನ್ನು ಉಕ್ರೇನ್ ದಂಪತಿ ಗುರೂಜಿಯವರಲ್ಲಿ ತಿಳಿಸಿದ್ದು, ಅದರಂತೆ ದೇಸಿ ದನದ ಜೊತೆಗೆ ವಿಹಾರ ಸಹಿತ ನಾಟಿ ಚಿಕಿತ್ಸೆ ಆರಂಭಿಸಿದ್ದರು. ಹಾಗಾಗಿ ಕಳೆದ ಮೂರು ತಿಂಗಳಿನಿಂದ ಕುಮ್ಡೇಲುವಿನ ಶ್ರೀ ರಾಧಾ ಸುರಭೀ ಗೋಮಂದಿರದಲ್ಲಿ ವಾಸ್ತವ್ಯ ಇದ್ದರು. ಜನ್ಮಾಷ್ಟಮಿಯ ಸಂದರ್ಭ ನಡೆದ ಕೊರಗಜ್ಜನ ಕೋಲದಲ್ಲಿ ಅನಾರೋಗ್ಯಕ್ಕೆ ಪರಿಹಾರ ನೀಡುವಂತೆ ಕೋರಿಕೊಂಡಿದ್ದರಲ್ಲದೆ, ಅಗೇಲು ಸೇವೆ ನೀಡುವುದಾಗಿ ಹರಕೆ ಹೇಳಿದ್ದರು. ಇದೀಗ ಮಗ ಮ್ಯಾಕ್ಸಿಂ ಗುಣಮುಖನಾಗಿರುವ ಹಿನ್ನೆಲೆ ಅಜ್ಜನ ಪವಾಡಕ್ಕೆ ಋಣಿಯಾಗಿ ಈ ಕುಟುಂಬ ಶುಕ್ರವಾರ ರಾತ್ರಿ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ.