ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್: ಎರಡು ವಾರಗಳಿಂದ ನೀರಿಲ್ಲದೆ ತತ್ತರಿಸಿದ್ದ ಸುಳ್ಯ ನಗರದ ಜನ ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಸೋಮವಾರ ರಾತ್ರಿಯಿಡೀ ನಗರ ಪಂಚಾಯತ್ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಅವಿರತ ಶ್ರಮ ವಹಿಸಿ ಎರಡು ಪಂಪ್ ಸರಿಪಡಿಸಿದ್ದಾರೆ. ಈ ಮೂಲಕ ಇದೀಗ ನಗರದ ವಿವಿಧ ಕಡೆ ನೀರಿನ ಸರಬರಾಜು ಮತ್ತೆ ಆರಂಭಗೊಂಡಿದೆ. ಸ್ವತಃ ಈ ಬಗ್ಗೆ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ.
ಸುಳ್ಯ ನಗರದಲ್ಲಿ ಕೆಲವು ದಿನಗಳಿಂದ ವಿಪರೀತ ನೀರಿನ ಸಮಸ್ಯೆ ತಲೆದೂರಿತ್ತು. ನೀರಿಲ್ಲದೆ ಜನ ಕಂಗಾಲಾಗಿದ್ದರು. ಇದರಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬಿಂದಿಗೆ ಹಿಡಿದು ಪ್ರತಿಭಟನೆ ಕೂಡ ನಡೆದಿತ್ತು. ಈ ನಡುವೆ ನಗರ ಪಂಚಾಯತ್ ಅವಿರತ ಶ್ರಮ ವಹಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದೆ. ಎರಡು ವಾರಗಳಿಂದ ಕಲ್ಲುಮುಟ್ಲು ಪಂಪ್ ಹೌಸ್ ನಲ್ಲಿ ಮೂರು ಪಂಪ್ ಗಳಿದ್ದು, ಅದರಲ್ಲಿ ಎರಡು ಪಂಪ್ ಗಳು ಪದೇ ಪದೇ ಕೈಕೊಡುತ್ತಿದ್ದರಿಂದ ಸುಳ್ಯ ನಗರದ ಕೆಲವು ವಾರ್ಡ್ ಗಳಿಗೆ ನೀರಿನ ಸರಬರಾಜು ಮಾಡಲು ಸಮಸ್ಯೆಯಾಗಿತ್ತು. ಈ ವೇಳೆ ಜನರ ಆಕ್ರೋಶ ವ್ಯಕ್ತವಾಗಿತ್ತು., ಸೋಮವಾರವಷ್ಟೇ ನಗರಪಂಚಾಯತ್ ನಲ್ಲಿ ವ್ಯಕ್ತಿಯೊಬ್ಬರು ಸಾಲು ಬಿಂದಿಗೆ(ಕೊಡಪಾನ) ಇಟ್ಟು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು.
ಜನರಿಗೆ ನೀರು ನೀಡುವುದಕ್ಕೆ ಸಾಕಷ್ಟು ನಗರ ಪಂಚಾಯತ್ ವತಿಯಿಂದ ಪಿಕಪ್ ಮತ್ತು ಟ್ಯಾಂಕರ್ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ. ಮಂಗಳೂರಿನ ತಾಂತ್ರಿಕ ಸಿಬ್ಬಂದಿ , ನೀರು ಸರಬರಾಜು ವಿಭಾಗ, ಮಹಿಮಾ ಎಲೆಕ್ಟ್ರಿಕ್ಸ್
ಸೇರಿದಂತೆ ಹಲವರು ಹಾಳಾದ ಪಂಪ್ ಗಳನ್ನು ರಿಪೇರಿ ಮಾಡಿದ್ದಾರೆ. ಸಕಾಲದಲ್ಲಿ ಬಂದು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ನಗರ ಪಂಚಾತ್ ನ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕ ತಿಳಿಸಿದ್ದಾರೆ.