ವರದಿ: ರಸಿಕಾ ಮುರುಳ್ಯ
ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಪತ್ರಿಕಾ ಭವನ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದ ತಾಲೂಕು ಪತ್ರಕರ್ತರ ಕನಸು ನನಸಾಗಿದೆ.
ಸುಳ್ಯ ತಾಲೂಕು ಹಲವಾರು ಪತ್ರಕರ್ತರನ್ನು ನಾಡಿಗೆ ಪರಿಚಯಿಸಿದೆ. ರಾಜ್ಯ ಪತ್ರಿಕೋದ್ಯಮದಲ್ಲಿ ತಾಲೂಕಿನ ಪತ್ರಕರ್ತರ ಕೊಡುಗೆ ಅಪಾರ. ಪತ್ರಿಕಾ ಭವನ ಸುಳ್ಯದಲ್ಲಿ ತಲೆ ಎತ್ತಿ ನಿಂತಿರುವುದು ಪತ್ರಕರ್ತರಿಗೆಲ್ಲ ನೈತಿಕ ಶಕ್ತಿ ತುಂಬಿದೆ. ಇಡೀ ಊರಿನ ಸಹಕಾರ ಮತ್ತು ಬೆಂಬಲದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಸುಳ್ಯ ತಾಲೂಕು ಪಂಚಾಯತ್ ನೀಡಿದ ನಿವೇಶನದಲ್ಲಿ ರೂ.1. 25ಕೋಟಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದೀಗ ನೆಲ ಅಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭ ಬುಧವಾರದಂದು ಸುಳ್ಯದ ಅಂಬಟಡ್ಕದಲ್ಲಿ ನೆರವೇರಿದೆ.
ಗಣ್ಯಾತಿಗಣ್ಯರು ಭಾಗಿ
ರಾಜ್ಯ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಈ ನೂತನ ಭವನವನ್ನು ಉದ್ಘಾಟಿಸಿದರು. ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ವಿಪಕ್ಷ ಉಪನಾಯಕ ಯು.ಟಿ. ಖಾದರ್ , ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಡಾ| ಯು.ಪಿ. ಶಿವಾನಂದ , ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ರೇಣುಕಾಪ್ರಸಾದ್ ಕೆ.ವಿ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ| ಆರ್.ಕೆ. ನಾಯರ್, ಸುಳ್ಯ ವಿಭಾಗದ ತಹಶೀಲ್ದಾರ್ ಅನಿತಾ ಲಕ್ಷ್ಮೀ, ತಾ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭವಾನಿ ಶಂಕರ್, ಸುಳ್ಯ ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ, ರೆ|ಫಾ| ವಿಕ್ಟರ್ ಡಿಸೋಜ ಮೊದಲಾದ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊದಲಾದವರು ಹಾಗೂ ತಾಲೂಕಿನ ಜನಪ್ರತಿನಿಧಿಗಳು, ಪ್ರಮುಖ ಅಧಿಕಾರಿಗಳು, ದಾನಿಗಳು, ಸಹಕರಿಸಿದವರು ಮತ್ತಿತರರು ಪಾಲ್ಗೊಂಡಿದ್ದರು.
ಮಾಧ್ಯಮವು ಸೈನಿಕನಂತೆ ಕಾರ್ಯನಿರ್ವಹಿಸುತ್ತದೆ: ಒಡಿಯೂರು ಶ್ರೀ
ನ್ಯೂಸ್ ನಾಟೌಟ್ : ದೇಶದ ಸಂರಕ್ಷಣೆ ಮಾಡುವಲ್ಲಿ ಸೈನಿಕರ ಪಾತ್ರ ಮಹತ್ತರವಾದುದ್ದು. ಸಮಾಜವನ್ನು ತಿದ್ದುವಂತ ಒಂದಷ್ಟು ಕಾರ್ಯದಲ್ಲಿ ಪತ್ರಕರ್ತರು ಸೈನಿಕರಂತೆ ಕೆಲಸ ಮಾಡುತ್ತಾರೆ . ಸಮಾಜದ ಓರೆಕೋರೆಯನ್ನು ತಿದ್ದುವಲ್ಲಿ ಪತ್ರಕರ್ತರು ಮಹತ್ತರವಾದ ಕೆಲಸವನ್ನು ನಿರ್ವಹಿಸುತ್ತಾರೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.
ಸುಳ್ಯದ ಅಂಬಟಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡ ಪತ್ರಕರ್ತರ ಸಮುದಾಯದ ಭವನದ ನೆಲ ಅಂತಸ್ತಿನ ಕಟ್ಟಡ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಅವರು, ನೈತಿಕತೆಯನ್ನು ಅಥಾವ ಪತ್ರಕರ್ತರ ಧರ್ಮವನ್ನು ಮೀರದೆ ಕಾರ್ಯ ಮಾಡಲು ಸಾಧ್ಯವಾಗುತ್ತ? ಸಾಧ್ಯವಾದರೆ, ಸಮಾಜ ಸುಧಾರಣೆಯಾಗುತ್ತದೆ. ಸಮಾಜದ ಕೆಡುಕುಗಳು ಏನಿವೆ ? ಅದನ್ನು ಹೊರಹಾಕುವ ಕಾರ್ಯವನ್ನು ಪತ್ರಕರ್ತರಿಂದ ಮಾಡಲು ಸಾಧ್ಯವಾಗುತ್ತದೆ. ಸಮಾಜವಿರುವಂತದ್ದು, ಒಂದು ಆರ್ಥಿಕತೆಯಲ್ಲಿ , ಇನ್ನೊಂದು ಪರಮಾರ್ಥಿಕತೆಯಲ್ಲಿ. ಈ ಎರಡು ಜೊತೆ ಜೊತೆಗೆ ಹೋದಾಗ ಮಾತ್ರ ಸಮಾಜ ಬಲಿಷ್ಠವಾಗುವಂತದ್ದು ಎಂದು ತಿಳಿಸಿದರು.
ಪತ್ರಕರ್ತರು ರಾಜಿ ಮಾಡಿಕೊಳ್ಳಬಾರದು: ಸಚಿವ ಎಸ್ .ಅಂಗಾರ
ಪತ್ರಕರ್ತರು ನಿಖರ, ನೇರ ವರದಿ ಮಾಡುವ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸವಾಗಬೇಕಿದೆ. ನಮ್ಮ ಸ್ಪಷ್ಟತೆ, ಉದ್ದೇಶದಲ್ಲಿ ಯಾವುದೇ ರಾಜಿ ಮಾಡದೇ ನಮ್ಮ ಕೆಲಸದ ಬಗ್ಗೆ ಪ್ರಯತ್ನಿಸಿದಾಗ ಯಶಸ್ಸು ಸಾಧ್ಯ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ಸುಳ್ಯನ ಪತ್ರಕರ್ತರ ಸಮುದಾಯ ಭವನದ ನೆಲ ಅಂತಸ್ತನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಅವಶ್ಯಕತೆಗಳ ಬಗ್ಗೆ ಗಮನಹರಿಸಬೇಕು. ಜನರಿಗೆ ಭಯ ಬರುವಂತಹ ವರದಿ ನೀಡದೇ, ಸಮಾಜವನ್ನು ತಿದ್ದುವ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿ. ಸುಳ್ಯ ಕ್ಷೇತ್ರ ಈಗಾಗಲೇ ಹಲವಾರು ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಮುಂದಕ್ಕೆ ಸುಳ್ಯಕ್ಕೆ ಜಿಲ್ಲಾ ಕೇಂದ್ರದ ಅವಶ್ಯಕತೆಯನ್ನು ನಾವು ಮಾಡಿಯೇ ಮಾಡುತ್ತೇವೆ. ನನ್ನದು ಡಂಬಾಚಾರ ಅಲ್ಲ. ಅಭಿವೃದ್ಧಿ ಕೆಲಸದಲ್ಲಿ ಜನರ ಸಹಕಾರ ಅಗತ್ಯ ಎಂದು ಸಚಿವ ಎಸ್.ಅಂಗಾರ ಹೇಳಿದರು.
ವಾಸ್ತವ ಮರೆಮಾಚಬಾರದು: ಸಚಿವ ಸುನಿಲ್ ಕುಮಾರ್
ಪ್ರೆಸ್ ಕ್ಲಬ್ ಕೊಠಡಿಯನ್ನು ಉದ್ಘಾಟಿಸಿದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ಇಂದಿನ ಬ್ರೇಕಿಂಗ್ ನ್ಯೂಸ್ ಯುಗದಲ್ಲಿ ವಾಸ್ತವ ಮರೆಮಾಚುವ ಕೆಲಸ ಆಗುತ್ತಿದೆ. ವಾಸ್ತವ ಸಂಗತಿ ಕಡಿಮೆ ಆಗಿದೆ. ಮೌಲ್ಯಾಧಾರಿತ ವರದಿಯನ್ನು ಮಾಡಿದಾಗ ಸಮಾಜ, ವ್ಯವಸ್ಥೆ ಉತ್ತಮ ಸಮಾಜ ನಿರ್ಮಾಣ ಆಗಲಿದೆ ಎಂದು ತಿಳಿಸಿದರು. ಅತಿಥಿ ಗೃಹ ಉದ್ಘಾಟಿಸಿದ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ಪತ್ರಕರ್ತರು ಏನು ಬರೆಯಬೇಕು ಎಂದು ಆಲೋಚಿಸದಂತೆ ಏನು ಬರೆಯಬಾರದು ಎಂಬುದನ್ನು ತಿಳಿದಿರಬೇಕು. ಹಿರಿಯ ಪತ್ರಕರ್ತರು ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡುವ ಕೆಲಸವಾಗಬೇಕಿದೆ ಎಂದರು.