ನ್ಯೂಸ್ ನಾಟೌಟ್ : ಸುಳ್ಯ ನಗರವನ್ನು ಸ್ವಚ್ಛ ಸುಂದರವಾಗಿಸುವಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಿರುವ ನಾಯಕರು ಪರಸ್ಪರ ಜಗಳವಾಡಿಕೊಂಡು ಹೊಯ್ ಕೈ ತನಕ ಮುಂದುವರಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜನ ಸಮಸ್ಯೆಗಳಿಗೆ ಸ್ಪಂದಿಸಬೇಕಿರುವ ನಮ್ಮ ಜನ ಪ್ರತಿನಿಧಿಗಳು ರಂಪಾಟ ಮಾಡಿಕೊಂಡು ಕೈಕೈ ಮಿಲಾಯಿಸುವಷ್ಟರ ಮಟ್ಟಕ್ಕೆ ಹೋಗಿದ್ದಾರೆ. ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ.
ಸುಳ್ಯದಂತಹ ಅಭಿವೃದ್ಧಿ ಹೊಂದುತ್ತಿರುವ ನಗರ ಪಂಚಾಯತ್ ನಲ್ಲಿ ದಿನ ಹೋದಂತೆ ಸಮಸ್ಯೆಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ಒಂದು ಕಡೆ ಕಸದ ಸಮಸ್ಯೆ, ಇನ್ನೊಂದು ಕಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಫಾರಂ ೩ ಸಮಸ್ಯೆ ಹೀಗೆ ಹಲವಾರು ಚರ್ಚೆ ಮಾಡಬಹುದಾದ ಸಮಸ್ಯೆಗಳು ನಮ್ಮ ಮುಂದಿದೆ. ಆದರೆ ಅಂತಹ ವಿಚಾರಗಳು ಸಭೆಯಲ್ಲಿ ಚರ್ಚೆ ಆಗುವುದೇ ಇಲ್ಲ. ಬದಲಿಗೆ ಅನಾವಶ್ಯಕ ವಿಚಾರಗಳ ಬಗ್ಗೆ ಚರ್ಚೆ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರು ನಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ನಾಯಕರನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ನೀವು ಅಲ್ಲಿ ಜಗಳ ಆಡಿ ಅನ್ನುವುದಕ್ಕೆ ಜನರು ನಿಮಗೆ ಓಟು ನೀಡಿಲ್ಲ. ನಿಮ್ಮನ್ನು ನೀವು ತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದಕ್ಕೆ ತಕ್ಕ ದಂಡ ತೆರಬೇಕಾಗಿ ಬರಬಹುದು ಎಂದು ಸುಳ್ಯದ ಹಿರಿಯ ನಾಯಕರೊಬ್ಬರು ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದಾರೆ. ಹಾಲಿ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಕೂಡ ಹೊಯ್ ಕೈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಇಂತಹ ಘಟನೆಗಳಿಂದ ಜನರ ಸಮಸ್ಯೆ ಬಗೆ ಹರಿಯುವುದಿಲ್ಲ. ಜನರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದರ ಕಡೆಗೆ ಮೊದಲು ಗಮನ ಕೊಡಬೇಕಿದೆ ಎಂದು ತಿಳಿಸಿದ್ದಾರೆ.
ಸುಳ್ಯದ ನಗರ ಪಂಚಾಯತ್ ವಿವಾದಗಳಿಂದ ಸುದ್ದಿಯಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕಸದ ವಿಚಾರದಲ್ಲಿ ನಟ ಅನಿರುದ್ಧ್ ಮಾಡಿದ್ದ ಒಂದು ಟ್ವೀಟ್ ನಿಂದ ಸುಳ್ಯ ರಾಜ್ಯದ್ಯಂತ ಸುದ್ದಿಯಾಗಿತ್ತು. ಜಾಲತಾಣದಲ್ಲಿ ಭಾರಿ ಟಾಕ್ ವಾರ್ ಗೆ ಕಾರಣವಾಗಿತ್ತು. ಅದಾದ ನಂತರ ಸುಳ್ಯದ ರಸ್ತೆಯ ಹೊಂಡ ಗುಂಡಿಯ ವಿಚಾರವೂ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈ ಘಟನೆ ಆರೋಪ ಪ್ರತ್ಯಾರೋಪ ಮಾಧ್ಯಮಗಳ ಮೇಲೆ ಸುಳ್ಳು ಅಪವಾದದ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನ್ನು ಜನ ಇನ್ನೂ ಮರೆತ್ತಿಲ್ಲ.
ನಮ್ಮ ಶಾಸಕರೇ ಈಗ ಸಚಿವರು. ಹಲವು ವರ್ಷಗಳಿಂದ ಶಾಸಕ ಅಂಗಾರ ಸುಳ್ಯವನ್ನು ಕಂಡಿದ್ದಾರೆ. ಜನರ ನೆರವಿನಿಂದ ಆರು ಬಾರಿ ಶಾಸಕರಾಗಿದ್ದಾರೆ. ಇಲ್ಲಿನ ಪ್ರತಿಯೊಂದು ಏರಿಳಿತವೂ ಅವರಿಗೆ ಗೊತ್ತು. ಹೀಗಿರುವಾಗ ಅವರು ಮನಸ್ಸು ಮಾಡಿದರೆ ಸಚಿವರಾಗಿದ್ದಾಗಲೇ ಸುಳ್ಯಕ್ಕೊಂದು ಒಳ್ಳೆಯ ಕೈಗಾರಿಕಾ ವಲಯ ತರುವ ಪ್ರಯತ್ನ ನಡೆಸಬಹುದು. ಜಾಗದ ಸಮಸ್ಯೆ ಇದೆ ಅನ್ನುವುದೇ ಸಮರ್ಪಕ ಉತ್ತರವಾಗಲಾರದು. ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ. ನಮ್ಮ ಉದ್ದೇಶ ಸರಿಯಾಗಿರಬೇಕಷ್ಟೇ.