ನ್ಯೂಸ್ ನಾಟೌಟ್: ಒಂದೊಳ್ಳೆಯ ಉದ್ಯೋಗ ಪಡೆಯಬೇಕೆನ್ನುವ ಹಂಬಲವಿರುವ ಯುವಕರಿಗಾಗಿ ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಲಾಗಿದೆ. ಸಚಿವ ಎಸ್.ಅಂಗಾರ ಮೇಳಕ್ಕೆ ಚಾಲನೆ ನೀಡಿದರು.
ಬಂದರು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಎಸ್. ಅಂಗಾರರ ನೇತೃತ್ವದಲ್ಲಿ ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದ ಯುವಕರು, ವಿದ್ಯಾರ್ಥಿಗಳು ಉದ್ಯೋಗ ಮೇಳ ಲಾಭವನ್ನು ಪಡೆಯಬಹುದಾಗಿದೆ. ವಿಶೇಷ ಎಂದರೆ ಈ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿವೆ. ಉದ್ಯೋಗ ಮೇಳದಲ್ಲಿ ಹತ್ತನೇ ತರಗತಿ ಮೇಲ್ಪಟ್ಟು ವಿದ್ಯಾಭ್ಯಾಸ ಹೊಂದಿದ ಎಲ್ಲರೂ ಭಾಗವಹಿಸಬಹುದಾಗಿದೆ. ಈ ವೇಳೆ ಮಾತನಾಡಿದ ಅಂಗಾರ ಅವರು, ಇಂತಹ ಅವಕಾಶಗಳು ಬಂದಾಗ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷ ಡಾ ಕೆ.ವಿ.ಚಿದಾನಂದ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಉದ್ದೇಶ ಇಟ್ಟುಕೊಂಡು ಕೆವಿಜಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ವೃತ್ತಿ ಪರ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಒತ್ತು ನೀಡಿದ್ದೇವೆ. ಮೌಲ್ಯಯುತ ಶಿಕ್ಷಣ ಪಡೆದು ಕೌಶಲ್ಯ ಮತ್ತು ಸಾಮರ್ಥ್ಯ ಇರುವ ಉದ್ಯೋಗಿಗಳ ಸೃಷ್ಟಿಯಾಗಬೇಕು ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿದರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಕೆರಿಯರ್ ಡೆಸ್ಟಿನಿ ಮುಖ್ಯಸ್ಥೆ ಜಯಶ್ರೀ, ಎನ್ಎಂಸಿ ಪ್ರಾಂಶುಪಾಲ ಎಂ.ಎಂ.ರುದ್ರಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.