ನ್ಯೂಸ್ ನಾಟೌಟ್: ಸಂಪಾಜೆ ಗ್ರಾಮ ಪಂಚಾಯತ್ ವಿವಾದ ನಾಲ್ಕೈದು ತಿಂಗಳಿನಿಂದ ಭಾರಿ ಚರ್ಚೆಗೆ ಕಾರಣವಾಗಿದೆ. ಹಾಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಜಿ.ಕೆ.ಹಮೀದ್ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಲು ಭಾರಿ ಪ್ರಯತ್ನ ನಡೆದಿದ್ದು ಇದು ವಿಫಲವಾಗಿದೆ. ತಮ್ಮ ಆಸೆ ಈಡೇರದೇ ಇದ್ದಾಗ ಕಾಂಗ್ರೆಸ್ ನ ನಾಯಕರೇ ಈಗ ಸರಣಿ ರಾಜೀನಾಮೆಗೆ ಮುಂದಾಗಿದ್ದಾರೆ.
ಸೋಮಶೇಖರ್ ಕೊಯಿಂಗಾಜೆ ಹಾಗೂ ಅವರ ಬೆಂಬಲಿತರು ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಸುದೀರ್ಘ ಕಾಲ ಪಕ್ಷಕ್ಕಾಗಿ ದುಡಿದವರು ಹೀಗೆ ರಾಜೀನಾಮೆ ನೀಡಿದಾಗ ಕಾಂಗ್ರೆಸ್ ಹೈಕಮಾಂಡ್ ಮುಖಭಂಗಕ್ಕೆ ಈಡಾಗಿದೆ. ಈ ಸಮಸ್ಯೆ ಬಗೆ ಹರಿಸುವುದಕ್ಕಾಗಿ ತಾಲೂಕಿನಲ್ಲಿ ಕಾಂಗ್ರೆಸ್ ಕೋರ್ ಕಮಿಟಿ ರಚಿಸಲಾಗಿದೆ. ಆದರೆ ಈ ಕೋರ್ ಕಮಿಟಿಯಲ್ಲಿಯೇ ಈಗ ಸಹಮತ ಇಲ್ಲದಿರುವುದರಿಂದ ಎಷ್ಟು ಸಭೆ ನಡೆಸಿದರೂ ಪ್ರಯೋಜನ ಇಲ್ಲದಂತಾಗಿದೆ.
ಸಮಸ್ಯೆ ಬಗೆ ಹರಿಸುವುದಕ್ಕಾಗಿ ಕಳೆದೆರಡು ತಿಂಗಳಿನಿಂದ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನ ಈ ಸಭೆಯಲ್ಲಿ ಇಬ್ಬರು ದಿಗ್ಗಜ ನಾಯಕರೇ ಗೈರು ಹಾಜರಾಗಿದ್ದಾರೆ. ಇದುವರೆಗೆ ನಡೆದ ಒಂದೇ ಒಂದು ಸಭೆಯಲ್ಲೂ ಇಬ್ಬರು ಕೈ ನಾಯಕರು ಭಾಗಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ಸಂಪಾಜೆ ಗ್ರಾಮ ಪಂಚಾಯತ್ ವಿವಾದವನ್ನು ಬಗೆ ಹರಿಸುವುದಕ್ಕೆ ಹೇಗೆ ಸಾಧ್ಯ? ಎಂದು ಕೆಲ ಕಾಂಗ್ರೆಸ್ ನ ಹಿರಿಯ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿ ಸಭೆಗೂ ಇಬ್ಬರು ಗೈರು ಹಾಜರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪಾಜೆಯ ವಿವಾದ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಲಾಗುತ್ತಿದೆ.
ಶಿಸ್ತು ಉಲ್ಲಂಘಿಸಿರುವುದಕ್ಕಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿಕೆ ಹಮೀದ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಸ್ವತಃ ಸುಳ್ಯದ ಕಾಂಗ್ರೆಸ್ ಸಮಿತಿ ಆದೇಶ ಹೊರಡಿಸಿತ್ತು. ಆದರೆ ಇದೀಗ ರಾಜಿ ಸಂಧಾನಕ್ಕಾಗಿ ಅಮಾನತು ಮಾಡಿದ ಜಿಕೆ ಹಮೀದ್ ಅವರನ್ನೂ ಸಭೆಗೆ ಆಹ್ವಾನಿಸಿರುವುದು ವಿಪರ್ಯಾಸವೇ ಸರಿ.