- ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಹೋಟೆಲ್ ದರಗಳ ಪಟ್ಟಿಯಂತೂ ಗ್ರಾಹಕರ ಜೀವ ಹಿಂಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಇಲ್ಲೊಬ್ಬ ಹೋಟೆಲ್ ಮಾಲೀಕರು ಹಸಿದು ಬಂದವರಿಗೆ ಕೇವಲ ೧೦ ರು.ಗೆ ಊಟ ಕೊಟ್ಟು ಸುದ್ದಿಯಾಗಿದ್ದಾರೆ.
ಹೆಸರು ರಾಘವೇಂದ್ರ ಸರಳಾಯ. ವಯಸ್ಸು (೪೫). ಇವರ ತಾತ ವೆಂಕಟರಮಣ ೧೯೩೮ರಲ್ಲಿ ರಾಮ್ ಪ್ರಸಾದ್ ಎಂಬ ಹೆಸರಿನಲ್ಲಿ ಸುಳ್ಯದಲ್ಲಿ ಸಣ್ಣ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದರು. ನಂತರ ವೆಂಕಟರಮಣ ಸರಳಾಯ ಅವರ ಮಗ ಸುಂದರ ಸರಳಾಯ ಈ ಉದ್ಯಮವನ್ನು ಮುನ್ನಡೆಸಿಕೊಂಡು ಬಂದರು. ಇದೀಗ ಸುಂದರ ಸರಳಾಯರ ಹಿರಿಯ ಪುತ್ರ ರಾಘವೇಂದ್ರ ಸರಳಾಯ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಂದಿನಿಂದ ಇಂದಿನ ತನಕ ಈ ಹೋಟೆಲ್ ಹಸಿದವರ ಪಾಲಿನ ಸಂಜೀವಿನಿಯಾಗಿದೆ. ೩ ತಲೆಮಾರಿನಿಂದ ಈ ಹೋಟೆಲ್ ನಡೆಸಿಕೊಂಡು ಬರಲಾಗುತ್ತದೆ. ಸುಳ್ಯದ ಶ್ರೀರಾಮ್ ಪೇಟೆಯಲ್ಲಿ ನೀವು ಈ ಅನ್ನ ದೇವಾಲಯವನ್ನು ಕಾಣಬಹುದಾಗಿದೆ.
ಉದ್ಯಮ ಅಂದ್ಮೇಲೆ ಸಾಮಾನ್ಯವಾಗಿ ಲಾಭವನ್ನೇ ಜನರು ಹುಡುಕುತ್ತಿರುತ್ತಾರೆ. ಆದರೆ ಸರಳಾಯರ ಕುಟುಂಬ ಜನರ ಹಸಿವನ್ನು ನೀಗಿಸುವ ಕೆಲಸದಲ್ಲೇ ತೊಡಗಿಸಿಕೊಂಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ೮೪ ವರ್ಷಗಳಿಂದ ಹಸಿದವರ ಹೊಟ್ಟೆ ತುಂಬಿಸುವ ಕಾಯಕ ಮಾಡುತ್ತಿದ್ದಾರೆ. ಅಂತಹ ಆಧುನಿಕ ಕರ್ಣನ ಸಮಾಜ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.