ನ್ಯೂಸ್ ನಾಟೌಟ್: ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ನಾಪತ್ತೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ದೊರೆಯುತ್ತಿದೆ. ಒಂದು ಕಡೆ ಪೊಲೀಸ್ ತನಿಖೆಯಿಂದ ಆಕೆ ಆಂಧ್ರಪ್ರದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ಆಕೆಯನ್ನು ಅಪಹರಿಸಲಾಗಿದೆ ಎಂದು ಪತಿ ಶಶಿಕಾಂತ್ ಮೂಕಮಲೆ ಕಣ್ಣೀರು ಹಾಕುತ್ತಿದ್ದಾರೆ.
ಮಹಿಳೆ ಕಾಣೆಯಾಗಿ ವಾರಗಳಾದರೂ ಇದುವರೆಗೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಆದರೆ ವಾಸ್ತವ ಸಂಗತಿಯನ್ನು ಮಾಧ್ಯಮಗಳು ವರದಿ ಮಾಡುತ್ತಿಲ್ಲ. ಈ ಪ್ರಕರಣವನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವಾದವೂ ಕೇಳಿ ಬರುತ್ತಿದೆ.
ಈ ಬಗ್ಗೆ ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಪತಿ ಶಶಿಕಾಂತ್ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ‘ಪತ್ನಿ ಭಾರತಿಯನ್ನು ಅಪಹರಿಸಲಾಗಿದೆ. ಆದರೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆಕೆ ಕಾಣೆಯಾಗುವ ಸಂದರ್ಭದಲ್ಲಿ ಮನೆಯಲ್ಲಿ ನೈಟಿ ಧರಿಸಿಕೊಂಡಿದ್ದಳು. ಆದರೆ ಪೊಲೀಸರು ಚೂಡಿ ಎಂದು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ. ನನ್ನ ಪತ್ನಿ ಅತ್ಯಂತ ಶ್ರಮ ಜೀವಿ. ಮನೆಯ ಎಲ್ಲ ಕೆಲಸಗಳನ್ನು ಅವಳೇ ನಿರ್ವಹಿಸುತ್ತಿದ್ದಳು. ಇಬ್ಬರು ಮಕ್ಕಳ ಲಾಲನೆ ಪಾಲನೆ ಮಾಡಿಕೊಂಡು ಪಂಚಾಯತ್ ಸದಸ್ಯೆಯಾಗಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಳು. ಆಕೆಗೆ ಯಾರೊಂದಿಗೂ ಶತೃತ್ವ ಇರಲಿಲ್ಲ. ಆಕೆ ಮನೆಯಿಂದ ಓಡಿ ಹೋಗಬೇಕೆಂದಿದ್ದರೆ ಇಷ್ಟು ವರ್ಷ ನನ್ನೊಂದಿಗೆ ಜೀವನ ಮಾಡಬೇಕೆಂದಿರಲಿಲ್ಲ. ಅಂಗಳದಲ್ಲಿ ಕೆಲಸ ಮಾಡಿಕೊಂಡು ಇದ್ದವಳನ್ನು ಕರೆದೊಯ್ಯಲಾಗಿದೆ. ಧರಿಸಿರುವುದು ಹಳೆಯ ಚಪ್ಪಲು, ಒಂದು ಜತೆ ಬಟ್ಟೆ ಕೂಡ ತೆಗೆದುಕೊಂಡು ಹೋಗಿಲ್ಲ. ಹಣ, ಬಂಗಾರ ಎಲ್ಲವೂ ಮನೆಯಲ್ಲಿದೆ. ಮನೆಬಿಟ್ಟು ಹೋಗುವವರು ಎಲ್ಲವನ್ನೂ ಬಿಟ್ಟು ಹೋಗುವುದಿಲ್ಲ. ಯಾರೋ ಬೇಕೆಂದೆ ಆಕೆಯನ್ನು ಅಪಹರಿಸಿದ್ದಾರೆ. ಪೊಲೀಸರು ಸತ್ಯ ತಿಳಿಯುವ ಪ್ರಯತ್ನ ನಡೆಸಬೇಕೆಂದು’ ಎಂದು ಒತ್ತಾಯಿಸಿದರು.