ನ್ಯೂಸ್ ನಾಟೌಟ್: ಒಂಟಿಯಾಗಿ ವಾಸಿಸುತ್ತಿದ್ದ ಬೆಳ್ತಂಗಡಿಯ ಮಹಿಳೆಯೊಬ್ಬರನ್ನು ಮುಸುಕುಧಾರಿಗಳ ತಂಡವೊಂದು ಕೈ ಕಾಲು ಕಟ್ಟಿ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿಸಿದ್ದಾರೆ. ಮಹಿಳೆ ಅಂಗಲಾಚಿದರೂ ಬಿಡದೆ ಮನೆಯಲ್ಲಿದ್ದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಅರಸಿಕಟ್ಟೆಯ ಪ್ರಭಾವತಿ ನಾಯ್ಕ (೬೭) ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ನ.೧೨ರಂದು ಒಂಟಿ ಮಹಿಳೆಯ ಮನೆಗೆ ನಾಲ್ವರು ಮುಸುಕುಧಾರಿಗಳು ಏಕಾಏಕಿ ನುಗ್ಗಿದ್ದಾರೆ. ಬಂದವರೇ ಮೊದಲು ಮಹಿಳೆಯನ್ನು ಬೆದರಿಸಿದ್ದಾರೆ. ಚಿನ್ನಾಭರಣ ಇಟ್ಟ ಜಾಗವನ್ನು ತೋರಿಸುವಂತೆ ಸೂಚಿಸಿದ್ದಾರೆ. ಗಾಬರಿಯಿಂದ ಮಹಿಳೆ ಬೀರು ತೋರಿಸಿದ ತಕ್ಷಣ ಮಹಿಳೆಯ ಕೈ ಕಾಲು ಕಟ್ಟಿ ಹಾಕಿದ್ದಾರೆ. ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ತಡಕಾಡಿ ಚಿನ್ನದ ಗಂಟನ್ನು ಹಿಡಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮೂಲಗಳ ಪ್ರಕಾರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಬೆಂಡೋಲೆ, ೩ ಚಿನ್ನದ ಬಳೆಗಳು, ೩ ಚಿನ್ನದ ಉಂಗುರಗಳು, ಚಿನ್ನದ ಚೈನ್ ಹಾಗೂ ಒಂದು ಮೊಬೈಲ್ನ್ನು ದೋಚಿ ಎಂಕ್ಲು ಬತ್ತಿನಾ ಕೆಲಸ ಆಂಡ್ ಎಂದು ತುಳುವಿನಲ್ಲಿ ಹೇಳುತ್ತಲೇ ದರೋಡೆಕೋರರು ಪರಾರಿಯಾಗಿದ್ದಾರೆ. ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು ರೂ. ೪,೬೦,೦೦೦ ಆಗಬಹುದೆಂದು ಅಂದಾಜಿಸಲಾಗಿದೆ. ವೇಣೂರು ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.