ನ್ಯೂಸ್ ನಾಟೌಟ್ : ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಬುಧವಾರ ಮಂಡಲಕಾಲ ಯಾತ್ರೆ ಆರಂಭವಾಗಿದೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಉದ್ಘಾರ ಮುಗಿಲು ಮುಟ್ಟಿದೆ. ಭಕ್ತರ ಯಾತ್ರೆ ಮಕರ ಸಂಕ್ರಮಣಕ್ಕೆ ಶಬರಿ ಗಿರಿಯತ್ತ ತೆರಳಲಿದೆ. ಅಲ್ಲಿನ ಪವಿತ್ರ ಜ್ಯೋತಿ ದರ್ಶನಕ್ಕೆ ಹಾತೊರೆಯುತ್ತಿದೆ.
ಮಂಡಲ- ಮಕರವಿಳಕ್ಕು ತೀರ್ಥಯಾತ್ರೆಗೆ ಪ್ರಸಿದ್ದ ಪುಣ್ಯಕ್ಷೇತ್ರವಾದ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ಬುಧವಾರದಂದು ತೆರೆಯಲಾಯಿತು. ಕ್ಷೇತ್ರದ ತಂತ್ರಿ ಕಂಠರರ್ ರಾಜೀವರ್ ಅವರ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕರಾದ ಎನ್ ಪರಮೇಶ್ವರನ್ ನಂಬೂದಿರಿ ಕ್ಷೇತ್ರದ ಗರ್ಭಗುಡಿಯ ಬಾಗಿಲನ್ನು ತೆರೆದರು. ಮೊದಲ ದಿನವೇ ಹೆಚ್ಚಿನ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಎರಡು ವರ್ಷಗಳಿಂದ ಭಕ್ತರಿಗೆ ನಾನಾ ನಿರ್ಬಂಧ ಹೇರಿದ್ದ ಕಾರಣ ಭಕ್ತರ ಸಂಖ್ಯೆ ಕಡಿಮೆಯಾಗಿತ್ತ್ತು.ಆದರೆ ನ.17 ರಿಂದ ವೃಶ್ಚಿಕ ಮಾಸದ ಮೊದಲ ದಿನ ಆರಂಭವಾಗಿದ್ದು, ಹೆಚ್ಚಿನ ಭಕ್ತರ ನಿರೀಕ್ಷೆ ಇದ್ದು, ಮುಂಜಾನೆ 4 ಗಂಟೆಗೆ ನೂತನ ಶಬರಿಮಲೆ ಪ್ರಧಾನ ಅರ್ಚಕರಾದ ಕೆ ಜಯರಾಮನ್ ನಂಬೂದಿರಿ ಗರ್ಭಗುಡಿಯ ಬಾಗಿಲು ತೆರೆಯುವರು. 41 ದಿನಗಳ ಮಂಡಲವಿಳಕ್ಕು ಪೂಜಾವಿಧಿಗಳು ಆರಂಭವಾಗಿದ್ದು ಡಿ.27 ಕ್ಕೆ ಮುಕ್ತಾಯವಾಗಲಿದೆ. ನಂತರ ಮೂರು ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಡಿ 30 ರಂದು ಮಕರವಿಳಕ್ಕು ದರ್ಶನಕ್ಕಾಗಿ ತೆರೆಯಲಾಗುವುದು. ಜನವರಿ 14 ರಂದು ಮಕರವಿಳಕ್ಕು , ಮಕರಜ್ಯೋತಿಯ ದರ್ಶನ ,ಪೂಜಾ ವಿದಿಗಳು ನಡೆದು ಜ. 20 ರಂದು ದೇಗುಲದ ಬಾಗಿಲು ಮುಚ್ಚಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದ್ದಾರೆ.