ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಭಾರಿ ಬಿರುಗಾಳಿ ಎದ್ದಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ನೊಳಗೆ ಭಿನ್ನಮತ ಸ್ಫೋಟಗೊಂಡಿದೆ. ಈ ಹಿನ್ನೆಲೆಯಲ್ಲಿ ಸರಣಿ ರಾಜೀನಾಮೆ ಪರ್ವ ಆರಂಭವಾಗಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಸೋಮಶೇಖರ ಕೊಯಿಂಗಾಜೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಮೂರು ಮಂದಿ ಅವರ ಬೆಂಬಲಿಗರೂ ರಾಜೀನಾಮೆ ನೀಡಿದ್ದಾರೆ. ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ ಹಾಗೂ ಸದಸ್ಯರಾದ ಶೌವಾದ್ ಗೂನಡ್ಕ, ವಿಮಲಾ ಪ್ರಸಾದ್ ರಾಜೀನಾಮೆ ಸಲ್ಲಿಸಿದ್ದಾರೆ. ಶುಕ್ರವಾರ ತಮ್ಮ ರಾಜೀನಾಮೆ ಪತ್ರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
ಅಧ್ಯಕ್ಷರ ಅಧಿಕಾರ ಹಸ್ತಾಂತರ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ಸಂಪಾಜೆ ಗ್ರಾಮ ಪಂಚಾಯತ್ ನೊಳಗೆ ಹೈಡ್ರಾಮಾ ನಡೆಯುತ್ತಲೇ ಇದೆ. ತಾನು ಸೂಚಿಸಿದ ವ್ಯಕ್ತಿಗೆ ವಚನದಂತೆ ಅಧಿಕಾರ ಹಸ್ತಾಂತರ ಮಾಡಲು ಸಾಧ್ಯವಾಗಿಲ್ಲ. ಹಿರಿಯ ನಾಯಕನಾದರೂ ಪಕ್ಷದೊಳಗೆ ನನ್ನ ಮಾತಿಗೆ ಕಿಂಚಿತ್ತೂ ಯಾರೂ ಬೆಲೆ ಕೊಡುತ್ತಿಲ್ಲ. ಹೈ ಕಮಾಂಡ್ ಕೂಡ ನನ್ನ ಪರವಾಗಿಲ್ಲ ಎನ್ನುವ ನೋವಿನಿಂದ ಸೋಮಶೇಖರ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಇವರ ಬೆಂಬಲಿಗರೂ ಕೂಡ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಸಾಮೂಹಿಕ ರಾಜೀನಾಮೆಯಿಂದ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬಲ ಕುಗ್ಗಿರುವುದಂತೂ ನಿಜ.
ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಸೋಮಶೇಖರ್ ಅಂಡ್ ಟೀಂ ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ. ಅದಿನ್ನೂ ಖಚಿತಪಟ್ಟಿಲ್ಲವಾದರೂ ಇಂತಹ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಸದ್ಯ ಸೋಮಶೇಖರ್ ಮುಂದೆ ಎರಡು ಪ್ರಮುಖ ದಾರಿಗಳಿವೆ. ಮೊದಲನೆಯದ್ದು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದು. ಉಳಿದ ಜೀವನವನ್ನು ನೆಮ್ಮದಿಯ ಕೃಷಿ ಬದುಕಿನ ಮೂಲಕ ಕಳೆಯುವುದು. ಎರಡನೇ ದಾರಿ ಬಿಜೆಪಿ ಪಕ್ಷವನ್ನು ಸೇರುವುದು. ತನ್ನನ್ನು ಅವಮಾನಿಸಿದ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುವುದು. ಸದ್ಯ ಈ ಎರಡು ದಾರಿಯಲ್ಲಿ ಸೋಮಶೇಖರ್ ಅಂಡ್ ಟೀಂ ಯಾವ ದಾರಿಯನ್ನು ಆಯ್ದುಕೊಳ್ಳುತ್ತದೆ ಅನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.