ನ್ಯೂಸ್ ನಾಟೌಟ್ : ಮನಸ್ಸಿದ್ದರೆ ನೂರು ಮಾರ್ಗ ಇದೆ ಅನ್ನುವುದಕ್ಕೆ ನೆಲ್ಯಾಡಿಯ ಶಾಲಾ ಬಾಲಕಿಯರು ಪ್ರತ್ಯಕ್ಷ ಉದಾಹರಣೆ. ವಲಯ, ತಾಲೂಕು ಜಿಲ್ಲೆ ನೋಡನೋಡುತ್ತಲೇ ಈ ಹುಡುಗಿಯರು ರಾಷ್ಟ್ರೀಯ ಮಟ್ಟಕ್ಕೆ ಏರಿ ಕಮಾಲ್ ಮಾಡಿದ್ದಾರೆ. ಬಾಲಕಿಯರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಿ ಭಾರಿ ಸುದ್ದಿಯಾಗಿದ್ದಾರೆ.
ರಾಜಸ್ಥಾನದ ಅಲವರಾ ಜಿಲ್ಲೆಯಲ್ಲಿ ವಿದ್ಯಾ ಭಾರತಿ ಖೇಲ್ ಪರಿಷತ್ ಇದರ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದಲ್ಲಿ ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ಹೀಗೆ ಮೂರು ರಾಜ್ಯವನ್ನು ಪ್ರತಿನಿಧಿಸಿದ್ದ ನೆಲ್ಯಾಡಿಯ ಶ್ರೀರಾಮ ಶಾಲೆಯ ಮಕ್ಕಳು ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಕ್ವಾರ್ಟರ್ಫೈನಲ್ನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಅಚ್ಚರಿಯ ಪ್ರದರ್ಶನ ನೀಡಿದ್ದರು. ನಂತರ ಸೆಮಿಫೈನಲ್ನಲ್ಲಿ ಪ್ರಚಂಡ ಪ್ರದರ್ಶನ ನೀಡಿ ಉತ್ತರ ಪ್ರದೇಶ ತಂಡವನ್ನು ಮಕಾಡೆ ಮಲಗಿಸಿದರು. ಯಾರೋ ಊಹಿಸದ ಸಾಧನೆ ಮಾಡಿ ಫೈನಲ್ಗೇರಿದ ಪ್ರತಿಭೆಗಳು ಮಂಗಳವಾರ ಫೈನಲ್ನಲ್ಲಿ ರೋಚಕ ಹೋರಾಟದ ಹೊರತಾಗಿಯೂ 8-6 ಅಂತರದಿಂದ ಬಲಿಷ್ಠ ಪಂಜಾಬ್ ತಂಡದ ಎದುರು ಸೋಲು ಅನುಭವಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು. ಫೈನಲ್ ನಲ್ಲಿ ಸೋತರೂ ಹಳ್ಳಿ ಪ್ರತಿಭೆಗಳ ಇಷ್ಟರ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಧಕ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಇದೀಗ ಇಡೀ ಊರು ಸಿದ್ಧವಾಗಿದೆ.
ಸಾಮಾನ್ಯವಾಗಿ ಎಲ್ಲ ವ್ಯವಸ್ಥೆಗಳು ಇದ್ದು ಸಾಧನೆ ಮಾಡಿದರೆ ಅದು ಸಾಧನೆ. ಆದರೆ ಕೊರತೆಗಳ ಅಡೆತಡೆಗಳ ಮೀರಿ ಮಾಡುವ ಸಾಧನೆಯನ್ನು ಪ್ರಚಂಡ ಸಾಧನೆ ಅನ್ನಬಹುದು. ಹೌದು, ಎಲ್ಲ ಮಕ್ಕಳು ಶೂ ಧರಿಸಿಕೊಂಡು ಕ್ರೀಡಾಂಗಣದಲ್ಲಿ ಮಿಂಚುತ್ತಿದ್ದರೆ ನಮ್ಮ ಹಳ್ಳಿ ಹುಡುಗಿಯರು ಬರಿ ಕಾಲಿನಲ್ಲಿ ಖೋಖೋ ಆಟವನ್ನು ಆಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರದರ್ಶನ ನೀಡಿರುವುದು ವಿಶೇಷ.