ನ್ಯೂಸ್ ನಾಟೌಟ್ : ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಪದೇ ಪದೇ ಕೇಳಿ ಬರುತ್ತಲೇ ಇದೆ. ಇದೀಗ ಮಹಾರಾಷ್ಟ್ರ ಸರಕಾರದ ವಿರುದ್ಧ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜನರು ಸಿಡಿದೆದ್ದಿದ್ದಾರೆ. ನೀರು ಕೊಡಿ ಇಲ್ಲ ನಮ್ಮನ್ನು ಕರ್ನಾಟಕಕ್ಕೆ ಬಿಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಏನು ಹೇಳಿದ್ರು ಜನ?
ನಮ್ಮ ಗ್ರಾಮಕ್ಕೆ ನೀರಿನ ವ್ಯವಸ್ಥೆ ತಕ್ಷಣ ಮಾಡಬೇಕು. ಎಂಟು ದಿನಗಳೊಗೆ ನೀರು ಬಿಡಬೇಕು. ಗಡುವನ್ನೂ ಮೀರಿದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ತಾಲೂಕಿಗೆ ಆಹ್ವಾನಿಸುತ್ತೇವೆ. ಕರ್ನಾಟಕವನ್ನು ಸೇರುವ ನಿರ್ಧಾರ ಘೋಷಿಸುತ್ತೇವೆ ಎಂದು ಹೇಳಿದ್ದಾರೆ. ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಮಹಾರಾಷ್ಟ್ರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಇಷ್ಟೇ ಅಲ್ಲದೆ ಮಹಾರಾಷ್ಟ್ರ ಸರಕಾರಕ್ಕೆ ತೀವ್ರ ಬಿಸಿ ತಟ್ಟಿದೆ. ಜತ್ತ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ 42 ಹಳ್ಳಿಗಳ ಜನ ಉಮದಿ ಗ್ರಾಮದಲ್ಲಿ ಶುಕ್ರವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.