ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್ : ತುಳುನಾಡಿನ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಮಹಿಮೆ ಅಪಾರ. ನಂಬಿದವರಿಗೆ ಇಂಬು ಕೊಡುವ ದೈವ, ಅದೆಷ್ಟೋ ಭಕ್ತರ ಪಾಲಿನ ಭರವಸೆಯ ಬೆಳಕು. ಅಂತಹ ಕಾರ್ಣಿಕ ದೈವದ ಹೆಸರನ್ನು ಹೇಳುವುದಕ್ಕೇ ಜನರು ಭಯಪಡುತ್ತಾರೆ. ಅಂತಹುದರಲ್ಲಿ ಕೆಲವು ದುಷ್ಕರ್ಮಿಗಳು ಕೊರಗಜ್ಜನ ಹೆಸರಿನಲ್ಲಿ ದೈವಸ್ಥಾನಗಳನ್ನು ಮೈಸೂರು ಹಾಗೂ ಬೆಂಗಳೂರಿನಲ್ಲಿ ನಿರ್ಮಿಸಿಕೊಂಡು ಭಕ್ತರಿಂದ ಹಣ ದೋಚುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬೆನ್ನಲ್ಲೇ ಕರಾವಳಿಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಅಜ್ಜನ ಹೆಸರಿನಲ್ಲಿ ಹಣ ದೋಚುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಇತ್ತೀಚೆಗೆ ಕೊರಗಜ್ಜನ ಕಾರ್ಣಿಕ ಮಹಿಮೆ ಎಲ್ಲ ಕಡೆ ಪಸರಿಸುತ್ತಿದೆ. ಇದರಿಂದಾಗಿ ಬೆಂಗಳೂರು , ಮೈಸೂರು ಸೇರಿದಂತೆ ವಿವಿಧ ಕಡೆಯ ಭಕ್ತರು ಕರಾವಳಿಗೆ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೊರಗಜ್ಜನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲವರು ಇಲ್ಲಿಯ ಆಚರಣೆಯನ್ನು ಅಲ್ಲಿ ಹೋಗಿ ನಡೆಸುವುದಕ್ಕೆ ಮುಂದಾಗಿದ್ದಾರೆ. ಕೊರಗಜ್ಜನ ಮೇಲೆ ಭಕ್ತರಿಗಿರುವ ನಂಬಿಕೆಯನ್ನು ಅಸ್ತ್ರ ಮಾಡಿಕೊಂಡು ಹಣದ ರೂಪದಲ್ಲಿ ವಸೂಲಿ ಮಾಡಲು ಮುಂದಾಗಿರುವುದು ವಿಪರ್ಯಾಸವೇ ಸರಿ. ಇಲ್ಲಿಯ ಆಚರಣೆ ತಿಳಿಯದೆ ತಾವೇ ಕಲ್ಲು ಹಾಗೂ ಕೊರಗಜ್ಜನ ಫೋಟೋ ಹಾಕಿಕೊಂಡು ಕೆಲವರು ಪೂಜೆ ಮಾಡುತ್ತಿದ್ದಾರೆ. ವಿಶೇಷವೆಂದರೆ ಏನೂ ಅರಿಯದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಇಂತಹ ಹಣ ಬಾಕರರ ಬಳಿ ಬರುತ್ತಿದ್ದಾರೆ.
ಇದೇ ಭಾನುವಾರ ದೈವದಕೋಲ ನಡೆಯಲಿದೆ ಎಂದು ಆಮಂತ್ರಣ ಪತ್ರಿಕೆ ಮುದ್ರಿಸಿಕೊಂಡಿದ್ದಾರೆ. ಇಂತಹ ಬೆಳವಣಿಗೆಗಳು ಕರಾವಳಿ ಜನರ ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ. ಸಿನಿಮಾಗಳಿಂದ ಪ್ರೇರಿತರಾಗಿ ಇಂತಹ ಕೃತ್ಯಕ್ಕೆ ಕೆಲವರು ಇಳಿದಿದ್ದಾರೆ. ಹಣ ಮಾಡುವುದಕ್ಕೆ ಅಜ್ಜನ ಹೆಸರನ್ನು ಬಳಸಿಕೊಳ್ಳುತ್ತಿರುವುದು ನಮ್ಮ ಸಂಸ್ಕೃತಿಗೆ ಧಕ್ಕೆ ಬರುವಂಥದ್ದಾಗಿದೆ ಎಂದು ದೈವಾರಾಧಕ ಮೋಹನ್ ಭಟ್ ಕಟು ಪದಗಳಿಂದ ಟೀಕಿಸಿದ್ದಾರೆ.