ವಿಶೇಷ ವರದಿ: ಶ್ರೀಜಿತ್ ಸಂಪಾಜೆ
ನ್ಯೂಸ್ ನಾಟೌಟ್ : ಗೂನಡ್ಕದ ಸಜ್ಜನ ಸಭಾಭವನದಲ್ಲಿ ನಡೆಯಲಿರುವ 26ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವ ಸಿದ್ಧತೆ ಭರದಿಂದ ಸಾಗುತ್ತಿದೆ. ಸಮ್ಮೇಳನದಲ್ಲಿ ಕನ್ನಡದ ಕಂಪು ಪಸರಿಸಲು ಸಂಪಾಜೆ ಗ್ರಾಮ ಸಿದ್ಧವಾಗಿದೆ. ಸುಳ್ಯ ತಾಲೂಕಿನ ಹಲವಾರು ಗಣ್ಯರು, ಕನ್ನಡಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಡುವೆ ಸಮ್ಮೇಳನಕ್ಕೆ ಯಾವ ರೀತಿಯಾದ ತಯಾರಿ ನಡೆಯುತ್ತಿದೆ ಅನ್ನುವುದರ ಕುರಿತು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಸಮ್ಮೇಳನದ್ದು ಒಂದು ರೀತಿಯಾದ ತಯಾರಿಯಾದರೆ ಇನ್ನೊಂದು ಕಡೆ ಬ್ಯಾನರ್ , ಮಾಧ್ಯಮದ ಮೂಲಕ ಪ್ರಚಾರ ನೀಡಲಾಗುತ್ತಿದೆ. ವಿವಿಧ ಸಮಿತಿಗಳನ್ನು ರಚಿಸಿಕೊಂಡು ಕೆಲಸಗಳನ್ನು ಹಂಚಲಾಗಿದೆ. ಬಹುತೇಕ ಕೆಲಸಗಳು ಮುಗಿಯುವ ಹಂತದಲ್ಲಿದೆ ಎಂದು ಪ್ರಚಾರ ಸಮಿತಿ ಸಂಚಾಲಕ ಹಾಗೂ ಹಾಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ಬ್ಯಾನರ್?
ಸುಳ್ಯ ತಾಲೂಕಿನ ಜಾಲ್ಸೂರಿನಿಂದ ಆರಂಭವಾಗಿ ಸಂಪಾಜೆ ಗೇಟ್ ವರೆಗೆ ಬ್ಯಾನರ್ಗಳನ್ನು ಅಳವಡಿಸಲು ತಯಾರಿ ನಡೆಯುತ್ತಿದೆ. ಪ್ರತಿ ಬ್ಯಾನರ್ ನಲ್ಲಿಯೂ ಸಾಹಿತ್ಯ ಸಮ್ಮೇಳನದ ಪೂರ್ಣ ವಿವರವನ್ನು ನೀಡಲಾಗಿದೆ. ಮನೆಮನೆಗೆ ಕನ್ನಡದ ಕಂಪನ್ನು ಪಸರಿಸುವುದಕ್ಕೆ ಕನ್ನಡದ ಕಟ್ಟಾಳುಗಳು ಸಿದ್ಧವಾಗಿದ್ದಾರೆ.
ಕೃತಕ ದ್ವಾರ ನಿರ್ಮಾಣ
ಸುಳ್ಯದಿಂದ ಆರಂಭವಾಗಿ ಸಂಪಾಜೆವರೆಗೆ ಅಲ್ಲಲ್ಲಿ ಕೃತಕ ಸ್ವಾಗತ ದ್ವಾರಗಳನ್ನು ನಿರ್ಮಿಸುವುದಕ್ಕೆ ಆರಂಭಿಸಲಾಗಿದೆ. ದ್ವಾರಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ವಿವಿಧ ಕಲಾಕೃತಿ, ಮಾಹಿತಿ ಇರಲಿದೆ. ಇಡೀ ರಾಜ್ಯವನ್ನು ಗಮನ ಸೆಳೆಯುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಬೇಕಾಗಿರುವ ಸರ್ವ ಸಿದ್ಧತೆಗಳನ್ನು ನಡೆಸಲಾಗಿದೆ.
ವಾಹನದ ಮೂಲಕ ಪ್ರಚಾರ
ಕನ್ನಡದ ಬಗೆಗಿನ ಅರಿವಿಗಾಗಿ ವಾಹನದ ಮೂಲಕ ಹಾಡು, ಜಾಗೃತಿಯನ್ನು ಮಾಡಲಾಗುತ್ತಿದೆ. ಇದೆಲ್ಲದ್ದಕ್ಕೂ ತಾಲೂಕಿನಿಂದ ಉತ್ತಮ ಸ್ಪಂದನೆ ದೊರಕಿದೆ. ಅಲ್ಲದೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸುವ ಸಾಹಿತಿಗಳಿಗೆ ಉಳಿದುಕೊಳ್ಳಲು ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಳ್ಯ ತಾಲೂಕಿನ ಎಲ್ಲ ಪಂಚಾಯತ್ ಗಳಿಗೆ ಸಮ್ಮೇಳನದ ಕುರಿತು ಕಾರ್ಯನಿರ್ವಹಣಾಧಿಕಾರಿ ಮೂಲಕ ಸಂದೇಶವನ್ನು ಕಳಿಸಲಾಗಿದೆ ಎಂದು ಜಿ.ಕೆ.ಹಮೀದ್ ತಿಳಿಸಿದ್ದಾರೆ.