ನ್ಯೂಸ್ ನಾಟೌಟ್: ಅಪ್ರಾಪ್ತ ಮಕ್ಕಳಿಗೆ ವಾಹನ ಕೊಡಬಾರದು ಎಂದು ಸರಕಾರದ ನಿಯಮ ಇದ್ದರೂ ಕೆಲವು ಪೋಷಕರು ಮಕ್ಕಳ ಕೈಗೆ ಗಾಡಿ ನೀಡಿ ಸಂಭವನೀಯ ಭಾರಿ ಅಪಾಯಕ್ಕೆ ಕಾರಣವಾಗುತ್ತಿದ್ದಾರೆ. ಇಲ್ಲೊಬ್ಬ ಅಪ್ಪ ತನ್ನ ಅಪ್ರಾಪ್ತ ಮಗನಿಗೆ ವಾಹನ ನೀಡಿ ಇದೀಗ ಸಿಕ್ಕಿಬಿದ್ದಿದ್ದಾನೆ. ಮಾತ್ರವಲ್ಲ ತನ್ನ ತಪ್ಪಿಗೆ ಬರೋಬ್ಬರಿ 20 ಸಾವಿರ ದಂಡ ತೆತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯ 20 ಸಾವಿರ ದಂಡ ವಿಧಿಸಿದೆ.
ಕೊಯಿಲ ಗ್ರಾಮದ ಕೆ.ಸಿ.ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ದಂಡ ಪಾವತಿಸಿದವರು. 2020ರಲ್ಲಿ ಅಬ್ದುಲ್ ರಹಿಮಾನ್ ಅವರು ತಮ್ಮ ಅಪ್ರಾಪ್ತ ಪುತ್ರನಿಗೆ ಬೈಕ್ ಚಲಾಯಿಸಲು ನೀಡಿದ್ದರು. ಈ ಬೈಕ್ ಅಪಘಾತವಾದ ಹಿನ್ನೆಲೆಯಲ್ಲಿ ಬಾಲಕನ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ಎ.ಸಿ.ಜೆ. ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿ ಅವರು, ಅಪ್ರಾಪ್ತನಿಗೆ ಬೈಕ್ ನೀಡಿದ್ದಕ್ಕಾಗಿ ಬಾಲಕನ ತಂದೆ ಬೈಕ್ ಮಾಲಕ ಅಬ್ದುಲ್ ರಹಿಮಾನ್ ಅವರಿಗೆ 20 ಸಾವಿರ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಎ.ಪಿ.ಪಿ. ಕವಿತಾ ಅವರು ವಾದಿಸಿದ್ದರು.