ನ್ಯೂಸ್ ನಾಟೌಟ್: ಕನ್ನಡ ಶಾಲೆ ಉಳಿಸುವುದಕ್ಕಾಗಿ ಹಲವು ಅಭಿಯಾನ ನಡೆಯುತ್ತಿದೆ. ಈ ನಡುವೆಯೇ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘತ್ತರಗಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಕಟ್ಟಡಕ್ಕೆ ಭೂಮಿ ಖರೀದಿಸಲು ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ ಅವರು ‘ಅಕ್ಷರ ಜೋಳಿಗೆ’ ಅಭಿಯಾನ ನಡೆಸಿ ಈವರೆಗೆ ರು. 61 ಲಕ್ಷ ಸಂಗ್ರಹಿಸಿದ್ದಾರೆ.
ಭೂಮಿ ಖರೀದಿಸಲು ಹಣ ನೀಡುವಂತೆ ಹಲವು ಬಾರಿ ಕೋರಿದರೂ ಸರಕಾರ ಸ್ಪಂದಿಸಿರಲಿಲ್ಲ. ಈ ಸಂಬಂಧ ಒತ್ತಾಯಿಸಲು ಪಾದಯಾತ್ರೆ ಮೂಲಕ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಲಬುರಗಿಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಆಗ, ಪಾದಯಾತ್ರೆ ತಡೆದಿದ್ದ ಜಿಲ್ಲಾಡಳಿತವು ಹಣ ಒದಗಿಸುವ ಭರವಸೆ ನೀಡಿತ್ತು. ನಂತರ ಈಡೇರಿಸಲಿಲ್ಲ. ಈ ಬೆಳವಣಿಗೆಯನ್ನು ಗಮನಿಸಿ ಗ್ರಾಮದ ಮನೆಗಳಿಗೆ ತೆರಳಿ, ಹಣ ಸಂಗ್ರಹಿಸತೊಡಗಿದೆ. ವಾರದ ಹಿಂದೆ ರು. 25 ಲಕ್ಷ ಸಂಗ್ರಹವಾಗಿತ್ತು. ಈಗ ಆ ಮೊತ್ತ 61 ಲಕ್ಷಕ್ಕೆ ಏರಿದೆ. 2.5 ಎಕರೆ ಜಮೀನು ಖರೀದಿಸಿ ಅದರಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಶುಕ್ರವಾರ ಭೂಮಿ ಖರೀದಿ ಪ್ರಕ್ರಿಯೆ ಆಗಿದೆ‘ ಎಂದು ಡಾ. ಶಿವಾನಂದ ಸ್ವಾಮೀಜಿ ತಿಳಿಸಿದರು.
ಶಾಲೆಗೆ ಘತ್ತರಗಿಯ ಭಾಗ್ಯವಂತಿ ದೇವಿಯ ಹೆಸರಿಡಲು ನಿರ್ಧರಿಸಲಾಗಿದೆ. ಹಾಲಿ ಕಟ್ಟಡವು ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿಂದ ಶಾಲೆ ತೆರವುಗೊಳಿಸಲು ಸೂಚಿಸಿತ್ತು. ಅಲ್ಲದೇ, ದುರಸ್ತಿ ಕಾರ್ಯ ನಡೆಸದಂತೆ ಇಲಾಖೆಯು ನಿರ್ಬಂಧ ವಿಧಿಸಿತ್ತು ಎನ್ನಲಾಗಿದೆ. ಹೀಗಾಗಿ, ಕಟ್ಟಡ ನಿರ್ಮಿಸಲು ಮಂಜೂರಾಗಿದ್ದ ರು. 2 ಕೋಟಿ ಹಣ ಬಳಕೆಯಾಗದೇ ಶಿಕ್ಷಣ ಇಲಾಖೆಯಲ್ಲೇ ಉಳಿದಿತ್ತು. ‘ಶಾಲೆ ಕಟ್ಟಡದ ವಿಚಾರವನ್ನು ಶಿವಾನಂದ ಸ್ವಾಮೀಜಿ ಅವರ ಗಮನಕ್ಕೆ ತಂದೆವು. ಆಗ ಸ್ವಾಮೀಜಿ ಅವರು ಎಲ್ಲರಿಂದ ಹಣ ಸಂಗ್ರಹಿಸಿ ಶಾಲೆ ನಿರ್ಮಿಸಲು ಸಂಕಲ್ಪ ತೊಟ್ಟರು. ಮೊದಲಿಗೆ ತಾವೇ ಮಠದಿಂದ ₹ 1 ಲಕ್ಷ ದೇಣಿಗೆ ನೀಡಿದರು’ ಎಂದು ಗ್ರಾಮಸ್ಥರು ತಿಳಿಸಿದರು.