ನ್ಯೂಸ್ ನಾಟೌಟ್ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಭೀಕರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಶ್ರದ್ಧಾಳನ್ನು ಗೆಳೆಯ ಅಫ್ತಾಬ್ 32 ತುಂಡುಗಳಾಗಿ ಕತ್ತರಿಸಿ ದಿಲ್ಲಿಯ ಬೀದಿಗಳ ತುಂಬಾ ಚೆಲ್ಲಾಡಿದ್ದ. ಇದೀಗ ದಿಲ್ಲಿಯಲ್ಲಿಯೇ ಅಂತಹುದೇ ಮತ್ತೊಂದು ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಮಗ ಸೇರಿಕೊಂಡು ಪತಿಯನ್ನು ಭೀಕರವಾಗಿ ಕೊಂದು ಮೃತದೇಹವನ್ನು 22 ತುಂಡು ಮಾಡಿ ಫ್ರಿಡ್ಜ್ ನಲ್ಲಿಟ್ಟ ಸ್ಪೋಟಕ ಸುದ್ದಿ ಹೊರಬಿದ್ದಿದೆ.
ಪಾಂಡವನಗರ ನಿವಾಸಿ ಅಂಜನ್ ದಾಸ್ ಮೃತ ಪಟ್ಟವರು. ಅವರ ಪತ್ನಿ ಪೂನಂ, ಮಗ ದೀಪಕ್ ಸೇರಿ ಅಂಜನ್ ದಾಸ್ ಗೆ ಅಮಲು ಮಾತ್ರೆಗಳನ್ನು ತಿನ್ನಿಸಿ ಬಳಿಕ ಕೊಂದಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳು ಆತನ ದೇಹವನ್ನು 22 ಪೀಸ್ ಮಾಡಿ ಫ್ರೀಡ್ಜ್ ನಲ್ಲಿ ಇಟ್ಟು ಬಳಿಕ ಇಬ್ಬರೂ ಬೇರೆ ಬೇರೆ ದಿನಗಳಲ್ಲಿ ಬಂದು ಮಧ್ಯರಾತ್ರಿಯಲ್ಲಿ ಮೃತದೇಹದ ಭಾಗಗಳನ್ನು ಚಾಂದ್ ಚಿತ್ರಮಂದಿರದ ಮುಂಭಾಗದ ಮೈದಾನದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಜೂನ್ ತಿಂಗಳಿನಲ್ಲಿ ದೆಹಲಿಯ ಪಾಂಡವ್ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ದೇಹದ ಭಾಗಗಳು ಪತ್ತೆಯಾಗಿದ್ದು, ಅವುಗಳ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ದೇಹದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಅಂಜನ್ ಗೆ ಬೇರೊಂದು ಮಹಿಳೆಯ ಜೊತೆ ಅನೈತಿಕ ಸಂಬಂಧ ಇದ್ದುದರಿಂದ ತಾಯಿ-ಮಗ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.