ನ್ಯೂಸ್ ನಾಟೌಟ್ : ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಭಾಗಿಯಾಗುತ್ತಿದ್ದ ಭವಿಷ್ಯದಲ್ಲಿ ಅಂಬಾರಿ ಹೊರಬೇಕಿದ್ದ ಗೋಪಾಲಸ್ವಾಮಿ ಆನೆ (೩೯) ಕಾಡಾನೆ ದಾಳಿಗೆ ತುತ್ತಾಗಿ ಬುಧವಾರ ಮೃತಪಟ್ಟಿದೆ. ಘಟನೆಯು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕೊಳುವಿಗೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಘಟನೆಯಲ್ಲಿ ನೇರಳಕುಪ್ಪೆ ಬಿ. ಹಾಡಿಯ ಕ್ಯಾಪಿನಿಂದ ಮೇಯಲು ಅರಣ್ಯಕ್ಕೆ ಬಿಟ್ಟಿದ್ದ ವೇಳೆ ಮಸ್ತಿಗೆ ಬಂದ ಗೋಪಾಲಸ್ವಾಮಿ ಆನೆಯು ಕೊಳುವಿಗೆ ಅರಣ್ಯ ಪ್ರದೇಶಕ್ಕೆ ಹೋಗಿದೆ. ಈ ವೇಳೆ ಗೋಪಾಲಸ್ವಾಮಿ ಆನೆ ಮೇಲೆ ಅಯ್ಯಪ್ಪ (ಪಳಗಿಸಲೆಂದು ಹಿಡಿದಿದ್ದ)ಆನೆ ತೀವ್ರವಾಗಿ ದಾಳಿ ನಡೆಸಿದೆ. ನಾಲ್ವರು ವೈದ್ಯರ ತಂಡವು ಎಲ್ಲಾ ರೀತಿಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ ಒಂದು ಗಂಟೆಗೆ ಮೃತಪಟ್ಟಿದೆ. ಈ ಆನೆಯನ್ನು ೨೦೦೯ ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸರೆ ಹಿಡಿಯಲಾಗಿತ್ತು. ನಂತರ ಮತ್ತಿಗೋಡು ಆನೆ ಶಿಬಿರಕ್ಕೆ ಸೇರಿಸಲಾಯಿತು .೨೦೧೨ ರಿಂದ ೧೧ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಈ ಆನೆ ಭಾಗವಹಿಸುತ್ತಿತ್ತು. ಭವಿಷ್ಯದಲ್ಲಿ ಅಂಭಾರಿ ಹೊರಬೇಕಿತ್ತು ಎಂದು ಮಾವುತ ಮತ್ತು ಕಾರ್ಯನಿರ್ವಹಣಾ ಅಧಿಕಾರಿಗಳು, ವಿಷಾದ ವ್ಯಕ್ತಪಡಿಸಿದ್ದಾರೆ.