ನ್ಯೂಸ್ ನಾಟೌಟ್: ಇತ್ತೀಚೆಗೆ ಕೇರಳದಲ್ಲಿ ಇಬ್ಬರು ಮಹಿಳೆಯ ನರಬಲಿ ವಿಚಾರ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೀಗ ಹಸುಗೂಸನ್ನು ಬಲಿ ನೀಡುವುದಕ್ಕೆ ಮಹಿಳೆಯೊಬ್ಬಳು ಯತ್ನಿಸಿದ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಮಹಿಳೆ ಮಗುವನ್ನು ಅಪಹರಿಸಿ ಈ ಕೃತ್ಯ ಎಸಗಲು ಸಂಚು ರೂಪಿಸಿದ್ದಳು. ಅಷ್ಟರಲ್ಲಿ ಸಮಯಕ್ಕೆ ಸರಿಯಾಗಿ ಪೊಲೀಸರು ಬಂದು ಮಗುವನ್ನು ರಕ್ಷಿಸಿ ಹೆತ್ತವರಿಗೆ ಒಪ್ಪಿಸಿದ್ದಾರೆ.
ಮೃತಪಟ್ಟಿದ್ದ ತಂದೆಯನ್ನು ಉಳಿಸಲು, ಮಗು ಬಲಿ ಕೊಟ್ಟರೆ ಬದುಕಿಸಬಹುದು ಎಂಬ ಮೂಢನಂಭಿಕೆಯಿಂದ ಮಹಿಳೆಯೊಬ್ಬಳು ಎರಡು ತಿಂಗಳ ಹಸುಗೂಸನ್ನು ಅಪಹರಿಸಿದಳು. ಇದಕ್ಕಾಗಿ ಎರಡು ದಿನಗಳ ಹಿಂದೆ ದಿಲ್ಲಿಯ ಗರ್ಹಿ ಪ್ರದೇಶದಲ್ಲಿ ಮಗುವೊಂದನ್ನು ಕಳವು ಮಾಡಿದಳು. ಮಗು ನಾಪತ್ತೆಯಾಗಿರುವುದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಮಗುವನ್ನು ಬಲಿ ಕೊಡಲು ಯತ್ನಿಸಿದ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ರಕ್ಷಿಸಿ ಪೋಷಕರಿಗೆ ಮರಳಿಸಿದ್ದಾರೆ. ಮೂಲಗಳ ಪ್ರಕಾರ ಸಿಸಿಟಿವಿ ಆಧರಿಸಿ ಮಹಿಳೆ ಅಡಗಿದ್ದ ಮನೆ ಪತ್ತೆ ಹಚ್ಚಲಾಯಿತು ಎಂದು ತಿಳಿದು ಬಂದಿದೆ.